ಕೊಪ್ಪ: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಲಕ್ಷಾಂತರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಭಸ್ಮ

Update: 2018-06-24 16:20 GMT

ಕೊಪ್ಪ, ಜೂ.24: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಮನೆಗೂ ಹಾನಿಯಾದ ಘಟನೆ ತಾಲೂಕಿನ ಎಚ್.ಹೊಸೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ವಸಂತ ಪೂಜಾರಿ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಡೈನಿಂಗ್ ಹಾಲ್‍ನಲ್ಲಿದ್ದ ಪ್ರಿಜ್ ಸ್ಫೋಟಗೊಂಡು ಬೆಂಕಿ ಹರಡಿದ್ದು ಅದೇ ಕೋಣೆಯಲ್ಲಿದ್ದ ಮಿಕ್ಸಿ, ಗ್ರೈಂಡರ್, 1 ಕ್ವಿಂಟಾಲ್‍ನಷ್ಟು ಅಕ್ಕಿ, ಅಡಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ ಬರೆ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಬೆಂಕಿಯ ಕೆನ್ನಾಲಿಗೆಗೆ ಅಡಿಗೆ ಮನೆಯ ಛಾವಣಿಯ ಪಕ್ಕಾಸಿ ಸುಟ್ಟಿದ್ದಲ್ಲದೇ ಹಂಚುಗಳು ಒಡೆದು ಹೋಗಿದೆ. ಇಡೀ ಮನೆಯ ಗೋಡೆಗಳು ಮಸಿಯಿಂದ ಕಪ್ಪಾಗಿವೆ. ಪಕ್ಕದ ಅಡಿಗೆ ಕೋಣೆಯಲ್ಲಿ ಗ್ಯಾಸ್ ಒಲೆ, ಸಿಲಿಂಡರ್ ಇದ್ದು ಅದೃಷ್ಠವಶಾತ್ ಅದಕ್ಕೆ ಬೆಂಕಿ ತಗಲದೇ ಹೆಚ್ಚಿನ ಹಾನಿಯಾಗುವುದು ತಪ್ಪಿದೆ. ಮನೆಯ ಮೇಲ್ಬಾಗದಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದ್ದು ಅಕ್ಕಪಕ್ಕದವರು ಗಮನಿಸಿ ಕೂಡಲೇ ಕೊಪ್ಪ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂಧಿ ಮತ್ತು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿತು.

ಮನೆಯಲ್ಲಿ ವಸಂತ ಪೂಜಾರಿ ಪತ್ನಿ ಸುನಂದ ಹಾಗೂ ಇಬ್ಬರು ಹೆಣ್ಣುಮಕ್ಕಳು ವಾಸವಿದ್ದು, ಘಟನೆ ನಡೆದ ಸಂದರ್ಭ ಸುನಂದರವರು ಕೂಲಿ ಕೆಲಸಕ್ಕೆ ತೆರಳಿದ್ದರು, ಮಕ್ಕಳು ಕಾಲೇಜಿಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಸುನಂದ ಪೂಜಾರ್ತಿ ಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಪ್ಪ ಪೊಲೀಸ್, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಜಿ. ಸವಿನಾಥ್, ಸದಸ್ಯ ಎಚ್.ಆರ್. ಜಗದೀಶ್, ಪಿಡಿಒ ಅನಸೂಯ ಮುಂತಾದವರು ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News