ಸ್ವಾತಂತ್ರ್ಯ ಹೋರಾಟಗಾರರ ಅವಹೇಳನ ಸಲ್ಲದು: ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರದೇವಿ

Update: 2018-06-24 16:29 GMT

ಚಿಕ್ಕಮಗಳೂರು, ಜೂ.23 ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುಮಾತು, ಅವಹೇಳನ, ಅಸಡ್ಡೆ  ಸಲ್ಲದು ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲೂಕಿನ ಹಿರೇಗೌಜ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದಿ.ಡಿ.ಎಸ್.ಕೃಷ್ಣಪ್ಪಗೌಡ ಮತ್ತು ದಿ.ಹಳಸೇ ಭೈರೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯ್ನಾಡಿನ ಮುಕ್ತಿಗಾಗಿ ಲಕ್ಷಾಂತರ ದೇಶಭಕ್ತರು ತಮ್ಮ ಕುಟುಂಬ, ತನು ಮನ ಧನ ಸೇರಿದಂತೆ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದಾರೆ, ಅವರ ತ್ಯಾಗ ಮತ್ತು ಬಲಿದಾನದಿಂದಾಗಿ ನಾವು ದಾಸ್ಯದಿಂದ ಮುಕ್ತರಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದರೆ ದುರಾದೃಷ್ಠವಶಾತ್ ನಮ್ಮಲ್ಲಿ ಅವರ ಬಗ್ಗೆ ಅನಾಧರವಿದೆ ಎಂದು ವಿಷಾದಿಸಿದರು.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ  ಲಘುವಾಗಿ ಮಾತನಾಡುವುದು, ಅವಹೇಳನ ಮಾಡುವುದು, ಅಣಕಿಸುವುದು ಮತ್ತು ಟೀಕಿಸುವ ಕೆಲಸ ನಡೆಯುತ್ತಿದೆ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ಇಡೀ ಪ್ರಪಂಚ ಗೌರವಿಸುತ್ತಿದೆ. ಭಾರತದಿಂದ ಹೋದವರನ್ನು ಗಾಂಧಿ ನೆಲದಿಂದ ಬಂದವರು ಎಂದು ಪುರಸ್ಕರಿಸಲಾಗುತ್ತಿದೆ, ಆದರೆ ನಮ್ಮ ದೇಶದಲ್ಲಿ ರಾಷ್ಟ್ರಪಿತನ ಚಿಂತನೆಯನ್ನೇ ವ್ಯವಸ್ಥಿತವಾಗಿ ಅಳಿಸಿ ಹಾಕುವ ಕಾರ್ಯ ನಡೆಯುತ್ತಿದೆ ಎಂದರು.

ಮಹಾತ್ಮಾ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣಾರ್ಪಣೆ ಮಾಡದಿದ್ದರೆ ನಮಗೆ ಸ್ವಾತಂತ್ರ್ಯವೆಲ್ಲಿ ಸಿಗುತ್ತಿತ್ತು ಎಂದು ಪ್ರಶ್ನಿಸಿದ ಅವರು, ಗಾಂಧಿ, ಬುದ್ದ, ಬಸವ ಮತ್ತು ದೇಶಭಕ್ತರ ಚಿಂತನೆಗಳು ಮತ್ತು ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಬೇಕಾದವು. ಅವುಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಬೇಕು ಅವರ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ದಿ.ಡಿ.ಎಸ್.ಕೃಷ್ಣಪ್ಪಗೌಡರು ಮತ್ತು ದಿ. ಹಳಸೇ ಭೈರೇಗೌಡರು ಪ್ರಕೃತಿಯನ್ನು ಪ್ರೀತಿಸಿದವರು. ಸಮಾಜಮುಖಿಗಳಾಗಿದ್ದವರು, ಸಮಾಜದ ಅಭಿವೃದ್ದಿಗಾಗಿ ದುಡಿದವರು, ಅಂತವರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗಾಂಧಿ ಅರ್ಥ ಚಿಂತನೆ ಮತ್ತು ಸರಳ ಜೀವನ ವಿಷಯ ಕುರಿತು ಶಿಕ್ಷಕ ಬಿ.ಎಂ.ಜ್ಞಾನಮೂರ್ತಿ ಹಾಗೂ ಸಾಹಿತ್ಯ ರಚನೆಯಲ್ಲಿ ಪ್ರಕೃತಿಯ ಪ್ರೇರಣೆ ವಿಷಯ ಕುರಿತು ಅಧ್ಯಾಪಕ ವೀರೇಶ ಕೌಲಗಿ ಉಪನ್ಯಾಸ ನೀಡಿದರು. ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದೊಂದಿಗೆ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ ತಿಲಕ್ ರಾಜ್, ದೇವರಾಜ್ ಉಪಸ್ಥಿತರಿದ್ದರು. ಶಿಕ್ಷಕರಾದ ಬಿ.ಎಲ್.ಸುಮಾ ಕಾರ್ಯಕ್ರಮವನ್ನು ನಿರೂಪಿಸಿದರು, ಎಸ್.ಸುಮನಾ ಸ್ವಾಗತಿಸಿದರು, ಲತಾ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News