ಕಳಸ: ಪತಿ, ಅತ್ತೆಯ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ; ಅರೋಪ

Update: 2018-06-24 16:44 GMT

ಕಳಸ, ಜೂ. 24: ಪತಿ ಹಾಗೂ ಅತ್ತೆ ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ಘಟನೆ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ನಡೆದಿದೆ. 

ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಜಯಲಕ್ಷ್ಮಿ (27)ಎಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಗೃಹಿಣಿಯ ಸಹೋದರ ಶ್ರೀಕಾಂತ್ ಪ್ರಭು ಎಂಬವರು ರಾಜೇಶ್ ಪ್ರಭು ಹಾಗೂ ಆತನ ತಾಯಿ ರೇಖಾ ಎಂಬವರ ವಿರುದ್ಧ ಕಳಸ ಪೊಲೀಸ್ ಠಾಣೆಯಲ್ಲಿ ಮಾನಸಿಕ, ದೈಹಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಜೇಶ್ ಪ್ರಭು ತಲೆ ಮರೆಸಿಕೊಂಡು ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.

ಪಟ್ಟಣದ ರಾಮಚಂದ್ರ ಪ್ರಭು ಎಂಬವರ ಮಗ ರಾಜೇಶ್ ಪ್ರಭುಗೆ 2013ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಒಂದೂವರೆ ವರ್ಷದ ತನಕ ಚೆನ್ನಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರಾಜೇಶ್ ತಂದೆ ರಾಮಚಂದ್ರ ಪ್ರಭು ಬಡ್ಡಿ ವ್ಯಾಪಾರ ಮಾಡುತ್ತಿದ್ದು, ರಾಜೇಶ್‍ನೂ ತಂದೆ ವ್ಯವಹಾರ ನೋಡಿಕೊಳ್ಳುತ್ತಿದ್ದ. ಈ ಹಿಂದೆ ಬೆಟ್ಟಿಂಗ್ ದಂಧೆಯಲ್ಲಿ ಭಾರೀ ಹಣ ಕಳೆದುಕೊಂಡ ರಾಜೇಶ್ ಈ ವಿಚಾರದಲ್ಲಿ ಪತ್ನಿ ಜಯಲಕ್ಷ್ಮಿಗೆ ಹಣಕ್ಕಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಜಯಲಕ್ಷ್ಮೀ ಪೋಷಕರು ಮನೆಯೊಂದನ್ನು ಮಾರಾಟ ಮಾಡಿ ರಾಜೇಶನಿಗೆ ಹಣ ನೀಡಿದ್ದರು ಎಂದು ತಿಳಿದು ಬಂದಿದೆ.

'ಹಣಕ್ಕಾಗಿ ರಾಜೇಶ್ ತನ್ನ ತಾಯಿ ರೇಖಾ ಜತೆ ಸೇರಿ ತನ್ನ ಸಹೋದರಿ ಜಯಲಕ್ಷ್ಮೀಗೆ ದೈಹಿಕ, ಮಾನಸಿಕ ಹಿಂದೆ ನೀಡುತ್ತಿದ್ದ, ಕಳೆದ ಮೂರು  ವರ್ಷಗಳಿಂದ ಪತಿ ಹಾಗೂ ಅತ್ತೆ ನೀಡುತ್ತಿದ್ದ ಮಾನಸಿಕ, ದೈಹಿಕ ಹಿಂಸೆಯಿಂದ ಜಯಲಕ್ಷ್ಮೀ ಮಾನಸಿಕವಾಗಿ ನೊಂದಿದ್ದಳು. ಕಳೆದ ಗುರುವಾರ ಮತ್ತೆ ತಾಯಿ ಮಗ ಸೇರಿಕೊಂಡು ದೈಹಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದರಿಂದ ಅಂದು ಸಂಜೆ ಪತಿಯ ಮನೆಯಲ್ಲಿ ಪ್ಯಾನ್‍ಗೆ ನೇಣು ಬಿಗಿದುಕೊಂಡು ಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಗೃಹಿಣಿಯ ಸಹೋದರ ಶ್ರೀಕಾಂತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ.

ದೂರಿನಂತೆ ಕಳಸ ಪೊಲೀಸರು ಶವದ ಮಹಜರು ನಡೆಸಿ ರಾಜೇಶ್ ಹಾಗೂ ಆತನ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಜೇಶ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News