ಹಣ,ಆಸ್ತಿಗಿಂತ ಜ್ಞಾನ ದೊಡ್ಡ ಸಂಪತ್ತು: ಭಗೀರಥ ಶ್ರೀ

Update: 2018-06-24 16:48 GMT

ತುಮಕೂರು,ಜೂ.24: ಹಣ,ಆಸ್ತಿಗಿಂತ ಜ್ಞಾನ ಸಂಪತ್ತು ಬಹಳ ಮುಖ್ಯವಾಗಿರುವುದರಿಂದ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಹೊಸದುರ್ಗದ ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ತಿಳಿಸಿದ್ದಾರೆ.

ನಗರದ ಮೆಳೆಕೋಟೆಯ ಭಗೀರಥ ವೃತ್ತದಲ್ಲಿ ಭಾನುವಾರ ಉಪ್ಪಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೊಂದಣಿ, ಪ್ರತಿಭಾ ಪುರಸ್ಕಾರ ಹಾಗೂ ಭಗೀರಥ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು, ಮಾನವನ ಅಭಿವೃದ್ಧಿಗೆ ವಿದ್ಯೆ ಬಹಳ ಮುಖ್ಯವಾದುದು. ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ಬಿಟ್ಟು ಹಾಗೂ ಹೆಚ್ಚು ಹಣ ಸಂಪಾದಿಸುವುದನ್ನು ನಿಲ್ಲಿಸಿ, ಮಕ್ಕಳಿಗೆ ಶಿಕ್ಷಣ ಕೊಡಿಸಿ ಜ್ಞಾನವಂತರನ್ನಾಗಿ ಮಾಡಿದರೆ ಮಕ್ಕಳು ಮುಂದಿನ ದಿನದಲ್ಲಿ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಿದ್ಯೆಯಿಂದ ಎಲ್ಲವನ್ನೂ ಪಡೆಯಲು ಸಾಧ್ಯವಾಗುತ್ತದೆ. ವಿದ್ಯೆ ಮನುಷ್ಯನಿಗೆ ಅವಿಭಾಜ್ಯ ಅಂಗವಿದ್ದಂತೆ. ವಿದ್ಯೆ ಕಲಿಯುವುದರಿಂದ ಧಾರ್ಮಿಕ ಮೌಲ್ಯಗಳನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಜ್ಞಾನ ಶಾಶ್ವತವಾಗಿ ಉಳಿಯುವ ಸಾಧನವಾಗಿದ್ದು, ಸಮುದಾಯದವರು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಬದುಕು ಕಟ್ಟಿಕೊಡಬೇಕು ಎಂದು ತಿಳಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಉಪ್ಪಾರ ಸಮುದಾಯ ಸಮಾಜದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಸಮುದಾಯದ ಪ್ರತಿಯೋಬ್ಬರು ವಿದ್ಯಾವಂತರಾಗಬೇಕು. ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯ ಹಲವಾರು ಸಮಸ್ಯೆಗಳನ್ನು ನಿತ್ಯ ಎದುರಿಸುತ್ತಿದೆ. ಸಮುದಾಯದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಗ್ರಾಮೀಣ ಭಾಗದಲ್ಲಿ ಬರುತ್ತಿರುವು ದರಿಂದ ನಗರದಲ್ಲಿ ವಸತಿ ಸೌಲಭ್ಯ ಇಲ್ಲದಂತಾಗಿದೆ. ಇಂತಹ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸ ವೃದ್ಧಿಸಲು ಸಮುದಾಯದ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ಸರಕಾರದ ಸಹಾಯೋಗದೊಂದಿಗೆ ವಿದ್ಯಾರ್ಥಿ ನಿಲಯಗಳನ್ನು ತೆರೆಯುವಂತೆ ತಿಳಿಸಿದರು.

ಮೈತ್ರಿ ಸರಕಾರದಲ್ಲಿ ಉಪ್ಪಾರ ಸಮುದಾಯದ ಮುಖಂಡರಾದ ಪುಟ್ಟರಂಗಶೆಟ್ಟಿಯವರನ್ನು ಕ್ಯಾಬಿನೇಟ್ ಸದಸ್ಯರನ್ನಾಗಿ ನೇಮಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರನ್ನಾಗಿ ನೇಮಕ ಮಾಡುವ ಮೂಲಕ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಲಾಗಿದೆ. ಇನ್ನೂ ಹಲವಾರು ಚುನಾಯಿತ ಕ್ಷೇತ್ರಗಳಲ್ಲಿ ಸಮುದಾಯದವರು ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆ ಆಗಬೇಕು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸಮುದಾಯದ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಲು ನಗರದಲ್ಲಿ ವಿದ್ಯಾರ್ಥಿನಿಲಯಗಳನ್ನು ತೆರೆಯಲು ಶಾಸಕರ ಅನುದಾನದಿಂದ ಹಣವನ್ನು ನೀಡಲಾಗುವುದು. ಸಮುದಾಯದವರು ಮುಂದೆ ಬಂದು ವಿದ್ಯಾರ್ಥಿ ನಿಲಯ ನಿರ್ಮಿಸುವಂತೆ ತಿಳಿಸಿದ ಅವರು, ನನ್ನ ತಂದೆ ಸಂಸದರಾಗಿದ್ದಾಗಿನಿಂದಲೂ ಉಪ್ಪಾರ ಸಮುದಾಯಕ್ಕೆ ಸಹಕರಿಸುತ್ತಲೇ ಬಂದಿದ್ದಾರೆ. ಆದರೆ ನನ್ನ ತಂದೆ ಅಧಿಕಾರದಲ್ಲಿ ಇಲ್ಲ. ಆದರೆ ಅವರ ಮಗನಾದ ನಾನು ಶಾಸಕರಾಗಿ ಆಯ್ಕೆಯಾಗಿದ್ದೇನೆ. ನಿಮ್ಮ ಸೇವೆಗೆ ಸದಾ ಸಿದ್ಧನಿರುತ್ತೇನೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಎಂ.ಎನ್ ವೆಂಕಟೇಶ್, ಉಪ್ಪಾರರ ಸಂಘದ ಅಧ್ಯಕ್ಷ ಎಂ.ಕೆ ಕನಕರಾಜು, ಕಾರ್ಯದರ್ಶಿ ಎಂ.ಬಿ.ಗಿರಿಯಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಎಂ.ಮಾರುತಿ ನರಸಿಂಗ್ ಹೋಂನ ಸಂಸ್ಥಾಪಕ ಡಾ.ವೆಂಕಟೇಶ್‍ಮೂರ್ತಿ ಹಾಗೂ ಸಮುದಾಯದ ಮುಖಂಡರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News