ಬಿಜೆಪಿಗರು ವಿನಾಕಾರಣ ನಮ್ಮನ್ನು ಟೀಕಿಸುತ್ತಿದ್ದಾರೆ: ಶಾಸಕ ಶಾಮನೂರು ಶಿವಶಂಕರಪ್ಪ

Update: 2018-06-24 16:59 GMT

ದಾವಣಗೆರೆ,ಜೂ.24: ಸ್ಮಾರ್ಟ್‍ಸಿಟಿ ಅನುದಾನ ಬಳಕೆ ಮಾಡುವ ಮೊದಲೇ ನಾವು ನಗರವನ್ನು ಸ್ಮಾರ್ಟ್ ಮಾಡಿದ್ದೇವೆ. ಇದನ್ನು ಸಹಿಸದ ಬಿಜೆಪಿಗರು ವಿನಾಕಾರಣ ನಮ್ಮನ್ನು ಟೀಕಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಮಾಗಾನಹಳ್ಳಿ ರಿಂಗ್ ರಸ್ತೆ ಬಳಿ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಹಾಗೂ ಸಿದ್ಧರಾಮೇಶ್ವರ ಬಡಾವಣೆಯಲ್ಲಿ ಚರಂಡಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಯವರು ಚುನಾವಣೆಯಲ್ಲಿ ಸೋತಿದ್ದರಿಂದ ಮಾಡಲು ಯಾವುದೇ ಕಾರ್ಯವಿಲ್ಲದೇ, ನಮ್ಮ ಅಭಿವೃದ್ಧಿ ಕಾರ್ಯ ಸಹಿಸದೇ ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪಾಲಿಕೆ ಮೇಯರ್ ಸೂಕ್ತ ತಿರುಗೇಟು ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.

ನನ್ನ ಪುತ್ರ ಚುನಾವಣೆಯಲ್ಲಿ ದಾವಣಗೆರೆಯ ಉತ್ತರದಿಂದ ಕ್ಷೇತ್ರದಿಂದ ಸೋತಿದ್ದರಿಂದ ಇಲ್ಲಿನ ಜನರಿಗೆ ಕುಡಿಯುವ ನೀರಿನ ಅಭಾವವನ್ನು ಕಾಂಗ್ರೆಸ್ ನಾಯಕರು ಸೃಷ್ಠಿಸುತ್ತಿದ್ದಾರೆ ಎಂಬ ಬಿಜೆಪಿಯವರು ಸುಳ್ಳುಸುದ್ದಿ ಹರಡುತ್ತಿದ್ದಾರೆ. ಆದರೆ, ಬಿಜೆಪಿಗರಿಗೆ ಹಣ ಹೊಡೆಯಲು ಅಧಿಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ಹೀಗೆ ದೂರುತ್ತಿದ್ದಾರೆ ಎಂದ ಅವರು, ಸಿದ್ದರಾಮೇಶ್ವರ ಬಡಾವಣೆಯ 7ರಿಂದ 10ನೇ ಕ್ರಾಸ್‍ವರೆಗೂ ಚರಂಡಿ ಪೈಪ್‍ಲೈನ್ ಕಾಮಗಾರಿಗೆ ಈಗ ಚಾಲನೆ ನೀಡಿದ್ದೇನೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಪರಿಸರ ದಿನಾಚರಣೆಯ ನಿಮಿತ್ತ ರಿಂಗ್ ರಸ್ತೆಯಲ್ಲಿ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದ ಅವರು, ನೀರಿನ ಸಮಸ್ಯೆ ನಿವಾರಣೆಗಾಗಿ ಹರಿಹರದಲ್ಲಿ 97 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವ ಕಾಮಗಾರಿಗೆ ಇದೇ ನವೆಂಬರ್ ನಲ್ಲಿ ಚಾಲನೆ ನೀಡಲಾಗುವುದು. ಇಲ್ಲಿ ಸುಮಾರು 500 ಮೀಟರ್ ಉದ್ದದ ಪೈಪ್ ಲೈನ್ ಹಾಕಲಾಗುತ್ತದೆ. ಶೀಘ್ರದಲ್ಲಿ ಕೆಲವು ಭಾಗಗಳಿಗೆ 24 ಗಂಟೆಗಳ ಕಾಲ ನೀರಿನ ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ಮುಂಬರುವ ದಿನಗಳಲ್ಲಿ ನಗರದಲ್ಲಿ ನೀರಿನ ಕೊರತೆ ಉದ್ಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಡೂಡಾ ಮಾಜಿ ಅಧ್ಯಕ್ಷ ಆಯೂಬ್ ಪೈಲ್ವಾನ್, ಪಾಲಿಕೆ ಸದಸ್ಯ ದಿನೇಶ್ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News