ದೇವೇಗೌಡರಿಂದ ಮಾತ್ರ ಕಾವೇರಿ ಬಿಕ್ಕಟ್ಟಿಗೆ ಪರಿಹಾರ: ಮಾಜಿ ಸಚಿವ ಚಲುವರಾಯಸ್ವಾಮಿ

Update: 2018-06-24 17:20 GMT

ಮಂಡ್ಯ, ಜೂ.24: ಹಲವಾರು ದಶಕಗಳಿಂದ ನೆನಗುದಿಗೆ ಬಿದ್ದಿರುವ ಕಾವೇರಿ ವಿವಾದವನ್ನು ಬಗೆಹರಿಸಲು ನೀರಾವರಿ ತಜ್ಞರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. 

ಇತ್ತೀಚೆಗೆ ನಿಧನರಾದ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡರ ಕುಟುಂಬಕ್ಕೆ ಸಾಂತ್ವಾನ ಹೇಳಲು ರವಿವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯದ ಜನತೆಗೆ ಉಂಟಾಗಬಹುದಾದ ಬಹುದೊಡ್ಡ ಅನಾಹುತವನ್ನು ತಪ್ಪಿಸಲು ದೇವೇಗೌಡರಿಂದ ಮಾತ್ರ ಸಾಧ್ಯ. ನೀರಾವರಿ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿರುವ ಅವರು ತಮ್ಮ ಪ್ರಭಾವವನ್ನು ಕೇಂದ್ರ ಸರಕಾರದ ಮೇಲೆ ಬಳಸಿ ರಾಜ್ಯದ ಜನತೆಗೆ ಅನುಕೂಲ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದ್ದಿದ್ದರೆ ಇಷ್ಟು ಹೊತ್ತಿಗಾಗಲೆ ದೇವೇಗೌಡರು ಕಾವೇರಿ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರಕಾರ ಇರುವುದಿರಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದೇವೇಗೌಡರ ಸಲಹೆ ಪಡೆದು ಸಮಸ್ಯೆ ಬಗೆಹರಿಸಲಿದ್ದಾರೆಂಬ ವಿಶ್ವಾಸ ತಮ್ಮದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಸಂಬಂಧಿಸಿದ ರಾಜ್ಯಗಳ ಜನತೆಯ ಅನುಕೂಲಕ್ಕೆ ತಕ್ಕಂತೆ ಕಾವೇರಿ ನೀರನ್ನು ಬಿಡುಗಡೆ ಮಾಡುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ನಾಲ್ಕು ರಾಜ್ಯದ ಅಧಿಕಾರಿಗಳ ವಿವೇಚನೆಯಿಂದ ಕಾವೇರಿ ನಿರ್ವಹಣಾ ಮಂಡಳಿ ಕೆಲಸ ಮಾಡಲಿದೆ. ಇಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇರುವುದಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾವೇರಿ ವಿವಾದವನ್ನು ಬಗೆಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಸರಕಾರ ನಡೆಯುತ್ತಿದ್ದು, ಮೋದಿಯವರ ಮೇಲೆ ರಾಜಕೀಯ ಹಿಡಿತ ಹೊಂದಿರುವ ದೇವೇಗೌಡರಿಗೆ ಕಾವೇರಿ ವಿವಾದ ಬಗೆಹರಿಸುವುದು ದೊಡ್ಡ ವಿಚಾರವೇನಲ್ಲ ಎಂದವರು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ದಬ್ಬಾಳಿಕೆ ಸಹಿಸಿಕೊಳ್ಳಬೇಕು: ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಮುನ್ಸೂಚನೆ ನೀಡಿರುವ ಮುಖ್ಯಮಂತ್ರಿಗಳ ಭರವಸೆ ಈಡೇರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷದ ದಬ್ಬಾಳಿಕೆಯನ್ನು ಕೆಲಕಾಲ ಸಹಿಸಿಕೊಳ್ಳಬೇಕು. ರಾಜ್ಯದ ಯಾವ ಜಿಲ್ಲೆಯಲ್ಲೂ ನೀಡದ ಗೆಲುವನ್ನು ಮಂಡ್ಯದ ಮತದಾರರು ಜೆಡಿಎಸ್ ಪಕ್ಷಕ್ಕೆ ನೀಡಿದ್ದಾರೆ. ಈ ಜಿಲ್ಲೆಗೆ ಒಳ್ಳೆಯದಾಗಬೇಕೆಂಬ ಏಕೈಕ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಕಿರುಕುಳವನ್ನು ಸಹಿಸಿಕೊಳ್ಳಬೇಕಾಗಿದೆ ಎಂದು ಚಲುವರಾಯಸ್ವಾಮಿ ಸಲಹೆ ನೀಡಿದರು. 

ಕಾವೇರಿ ವಿವಾದ ಇತ್ಯರ್ಥ, ರೈತರ ಸಾಲಮನ್ನಾ, ಮಹಿಳೆಯರು ಹಾಗೂ ವೃದ್ಧರಿಗೆ ಈ ಸರಕಾರದಲ್ಲಿ ಅನುಕೂಲವಾಗಬಹುದೆಂಬ ನಂಬಿಕೆ ನಮ್ಮದಾಗಿದ್ದು, ಜನರ ಹಿತಕ್ಕಾಗಿ ದಬ್ಬಾಳಿಕೆಯ ರಾಜಕಾರಣವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News