ಫೇಸ್‌ಬುಕ್‌ನಲ್ಲಿ ‘ಆಂಜನೇಯ’ನಿಗೆ ಅಪಮಾನ: ಚಿಕ್ಕಮಗಳೂರಿನ ಯುವಕನ ಬಂಧನ

Update: 2018-06-25 12:28 GMT

ಚಿಕ್ಕಮಗಳೂರು, ಜೂ.25: ಹನುಮಂತ ಟಿಪ್ಪು ಸುಲ್ತಾನನ ಕಾಲು ಮುಟ್ಟುತ್ತಿರುವ ಅವಹೇಳನಕಾರಿ ಫೊಟೊವೊಂದನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತನೊಬ್ಬನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲೆಯ ಎನ್.ಆರ್.ಪುರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ಸೋಮವಾರ ವರದಿಯಾಗಿದೆ.

ಜಿಲ್ಲೆಯ ನರಸಿಂಹರಾಜಪುರ ಪಟ್ಟಣದ ಫಯಾಝ್(16) ಎಂಬ ಅಪ್ರಾಪ್ತ ರವಿವಾರ ತನ್ನ ಫೇಸ್‍ಬುಕ್ ಪೇಜ್‍ಗೆ ಹನುಮಂತ ಟಿಪ್ಪು ಸುಲ್ತಾನನ ಕಾಲನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಸೇವೆ ಮಾಡುತ್ತಿರುವ ಫೊಟೊವೊಂದನ್ನು ಅಪ್‍ಲೋಡ್ ಮಾಡಿದ್ದ ಎನ್ನಲಾಗಿದ್ದು, ಈ ಸಂಬಂಧ ಎನ್.ಆರ್.ಪುರ ತಾಲೂಕಿನ ಸಂಘಪರಿವಾರದ ಸದಸ್ಯರು ರವಿವಾರ ರಾತ್ರಿ ವೇಳೆ ಪಟ್ಟಣದ ಠಾಣೆಯ ಎದುರು ಜಮಾಯಿಸಿ ಅವಹೇಳನಕಾರಿ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ. ನಂತರ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಠಾಣಾಧಿಕಾರಿ ನೀಡಿದ ಭರವಸೆ ಮೇರೆಗೆ ಧರಣಿ ಹಿಂಪಡೆಯಲಾಯಿತು ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಹಿಂದೂ ಸಂಘಟನೆಗಳ ಮುಖಂಡರು ಮುಂದೆ ಠಾಣೆಯ ಮುಂದೆ ಜಮಾಯಿಸಿ ಆರೋಪಿ ಬಂಧನಕ್ಕೆ ಪ್ರತಿಭಟನೆಗೆ ಮುಂದಾಗಿದ್ದರೆನ್ನಲಾಗಿದ್ದು, ಅಷ್ಟರೊಳಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ಫಯಾಝ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರಿಂದ ಪರಿಸ್ಥಿತಿ ಶಾಂತವಾಯಿತೆಂದು ತಿಳಿದು ಬಂದಿದೆ. ಬಂಧನಕ್ಕೊಳಗಾಗಿರುವ ಆರೋಪಿ ಫಯಾಝ್ ಅಪ್ರಾಪ್ತ ವಯಸ್ಸಿನವನೆಂದು ತಿಳಿದು ಬಂದಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News