ಧಾರವಾಡದ ವಾಲ್ಮಿ ಸಂಸ್ಥೆ ಸಬಲಗೊಳಿಸಲು ಸಿದ್ಧ: ಡಿ.ಕೆ.ಶಿವಕುಮಾರ್
ಧಾರವಾಡ, ಜೂ.25: ರಾಜ್ಯದ ವಿಶೇಷ ಜಲ ಮತ್ತು ನೆಲ ನಿರ್ವಹಣೆಗಾಗಿ ವೈಜ್ಞಾನಿಕವಾಗಿ ರೈತರನ್ನು ಮತ್ತು ಕೃಷಿ, ಜಲ ನಿರ್ವಹಣಾ ಸಿಬ್ಬಂದಿಗಳಿಗೆ ತರಬೇತಿ ನೀಡಲು ಅಸ್ತಿತ್ವಕ್ಕೆ ಬಂದಿರುವ ಧಾರವಾಡದ ವಾಲ್ಮಿ ಸಂಸ್ಥೆಯನ್ನು ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಮತ್ತು ಅಕಾಡೆಮಿಕ್‌ಗಾಗಿ ಸಬಲಗೊಳಿಸಲು ಸಿದ್ಧ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ವಾಲ್ಮಿ ಕಚೇರಿಯಲ್ಲಿ ವಾಲ್ಮಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. 1985 ರಿಂದ ಆರಂಭಗೊಂಡಿರುವ ವಾಲ್ಮಿ ಸಂಸ್ಥೆ ಹೆಚ್ಚು ಉಪಯುಕ್ತ ಮತ್ತು ನೆಲ ಜಲ ನಿರ್ವಹಣೆಗೆ ಪರಿಣಾಮಕಾರಿಯಾದ ಸಂಸ್ಥೆಯಾಗಿದೆ. ಇಲ್ಲಿ 47ಕ್ಕೂ ಹೆಚ್ಚು ಹುದ್ದೆಗಳು ಅನುಮೋದನೆಯಾಗಿದ್ದರೂ, ಕೇವಲ 10 ಜನ ಮಾತ್ರ ಸಿಬ್ಬಂದಿಗಳಿದ್ದಾರೆ. ಆರ್ಥಿಕ ನೆರವಿನ ಅಗತ್ಯವೂ ಇದೆ ಎಂದು ಅವರು ಹೇಳಿದರು.
ಜಲ ಸಂಪನ್ಮೂಲ ಇಲಾಖೆ, ನೀರಾವರಿ ಇಲಾಖೆ, ಕೃಷಿ ಹಾಗೂ ಜಲ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಕಾಡಾ ಸೇರಿದಂತೆ ವಿವಿಧ ನಿಗಮ, ಮಂಡಳಿಗಳಿಂದ ಪ್ರತಿ ವರ್ಷ ನಿಶ್ಚಿತ ಆದಾಯ ವಾಲ್ಮಿ ಸಂಸ್ಥೆಗೆ ಬರುವಂತೆ ಕ್ರಮ ಕೈಗೊಳಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಈ ಕುರಿತು ಪ್ರಸ್ತಾವನೆಯನ್ನು ರೂಪಿಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದ್ದು, ಮುಂಬರುವ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು. ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.
ನೈಸರ್ಗಿಕವಾಗಿ ನಮಗೆ ಲಭಿಸಿರುವ ನೆಲ, ಜಲ ಮತ್ತು ಗಿಡ ಮರಗಳನ್ನು ರಕ್ಷಿಸಲು ರೈತರಿಗೆ ಅಗತ್ಯ ತರಬೇತಿ ಹಾಗೂ ಜಾಗೃತಿಯನ್ನು ಮೂಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಬೇಕು. ವಿಶೇಷವಾಗಿ ಭವಿಷ್ಯತ್ತಿನ ದೃಷ್ಟಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳನ್ನು ಗಮನದಲ್ಲಿಟ್ಟು ಕಾರ್ಯಕ್ರಮಗಳನ್ನು ಮತ್ತು ಜಾಗೃತಿ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಶಿವಕುಮಾರ್ ಹೇಳಿದರು.
ಇಂದು ಶೇ.40ರಷ್ಟು ಜನ ಗ್ರಾಮೀಣ ಭಾಗದಿಂದ ನಗರಕ್ಕೆ ಉದ್ಯೋಗ ಅರಸಿ ಹೊಗುತ್ತಿದ್ದಾರೆ. ಆದರೆ ಸರಕಾರ ಕೃಷಿ ಹಾಗೂ ಗ್ರಾಮೀಣ ಸ್ವಯಂ ಉದ್ಯೋಗಗಳನ್ನು ಪ್ರೋತ್ಸಾಹಿಸಲು ಎಕರೆ ಮತ್ತು ತಲಾವಾರು ಆದಾಯವನ್ನು ವೆಚ್ಚ ಮಾಡುತ್ತಿದೆ. ವಾಲ್ಮಿ ಹಾಗೂ ಇಂತಹ ಧ್ಯೇಯಗಳನ್ನು ಹೊಂದಿರುವ ಸಂಸ್ಥೆಗಳ ಮೂಲಕ ಗ್ರಾಮೀಣ ಜನರಲ್ಲಿ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯೋಗಗಳ ಬಗ್ಗೆ ಆಸಕ್ತಿ ಮೂಡಿಸಲು ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಶಾಲಾ ಕಾಲೇಜುಗಳಿಗೆ ಪ್ರೋತ್ಸಾಹ ಧನ ನೀಡಿ ವಿದ್ಯಾರ್ಥಿಗಳಿಗೆ ನೆಲ, ಜಲ ಮತ್ತು ನಿಸರ್ಗ ಕುರಿತು ಸ್ಪರ್ಧೆ, ತಿಳುವಳಿಕೆ ಕಾರ್ಯಕ್ರಮಗಳನ್ನು ಸಂಘಟಿಸಲು ಕ್ರಮಕೈಗೊಳಲಾಗುವುು ಎಂದು ಶಿವಕುಮಾರ್ ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಅವರು ವಾಲ್ಮಿ ಸಂಸ್ಥೆಯ ಕಾರ್ಯಚಟುವಟಿಗಳು ಮತ್ತು ವಾಲ್ಮಿ ಪುನರುಜ್ಜೀವನಕ್ಕಾಗಿ ರೂಪಿಸಿರುವ ಕ್ರಿಯಾ ಯೋಜನೆಯನ್ನು ಪ್ರಸ್ತುತ ಪಡಿಸಿದರು.
ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಜಲ ಸಂಪನ್ಮೂಲ ಇಲಾಖೆಯ ಸರಕಾರದ ಕಾರ್ಯದರ್ಶಿ ಜೈಪ್ರಕಾಶ್, ರಾಜ್ಯ ನೀರಾವರಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಂಗೆ, ಸಚಿವರ ವಿಶೇಷ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ಸೇರಿದಂತೆ ವಾಲ್ಮಿ ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು.