ಶಿವಮೊಗ್ಗ: ಕೆರೆಯಲ್ಲಿ ಈಜಲು ತೆರಳಿದ ಬಾಲಕ ನೀರು ಪಾಲು
Update: 2018-06-25 19:59 IST
ಶಿವಮೊಗ್ಗ, ಜೂ. 25: ಕೆರೆಯಲ್ಲಿ ಈಜಲು ತೆರಳಿದ ಬಾಲಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ, ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಗದ್ದೆ ಕೆರೆಯಲ್ಲಿ ನಡೆದಿದೆ.
ಬಂದಗದ್ದೆ ಗ್ರಾಮದ ಎಸ್. ಸಿ. ಕಾಲೋನಿಯ ನಿವಾಸಿ ರಾಮಚಂದ್ರ (16) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿಯಿತ್ತ ಅಗ್ನಿಶಾಮಕ ದಳದ ಅಧಿಕಾರಿಗಳು, ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ನೀರಿನಿಂದ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
ಮೃತ ರಾಮಚಂದ್ರನು ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ರಾಮಚಂದ್ರ ನೀರಿನಲ್ಲಿ ಮುಳುಗುತ್ತಿದ್ದಂತೆ ಭಯಭೀತರಾದ ಸ್ನೇಹಿತರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.