×
Ad

ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು

Update: 2018-06-25 20:03 IST
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜೂ. 25: ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ದುರ್ಬಲಗೊಂಡಿದ್ದ ನೈರುತ್ಯ ಮಾನ್ಸೂನ್ ಮಾರುತಗಳಿಂದ ತಗ್ಗಿದ್ದ ಮುಂಗಾರು ಮಳೆಯ ಅಬ್ಬರ, ಇದೀಗ ಮತ್ತೆ ಚುರುಕುಗೊಳ್ಳಲಾರಂಭಿಸಿದೆ. ಸೋಮವಾರ ಬಹುತೇಕ ಜಿಲ್ಲೆಯಾದ್ಯಂತ ಮಳೆ ಬೀಳಲಾರಂಭಿಸಿದೆ. ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದೆ. 

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿಅಂಶದ ಮಾಹಿತಿ ಪ್ರಕಾರ, ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರಗಳಲ್ಲಿ ಬಿದ್ದ ಒಟ್ಟಾರೆ ವರ್ಷಧಾರೆಯ ಸರಾಸರಿ ಪ್ರಮಾಣ 13.61 ಮಿಲಿ ಮೀಟರ್ (ಮಿ.ಮೀ.) ಆಗಿದೆ. 
ಶಿವಮೊಗ್ಗದಲ್ಲಿ 4.40 ಮಿ.ಮೀ., ಭದ್ರಾವತಿಯಲ್ಲಿ 9.80 ಮಿ.ಮೀ., ತೀರ್ಥಹಳ್ಳಿಯಲ್ಲಿ 36.20 ಮಿ.ಮೀ., ಸಾಗರದಲ್ಲಿ 27 ಮಿ.ಮೀ., ಶಿಕಾರಿಪುರದಲ್ಲಿ 0.60 ಮಿ.ಮೀ., ಸೊರಬದಲ್ಲಿ 6.10 ಮಿ.ಮೀ. ಹಾಗೂ ಹೊಸನಗರದಲ್ಲಿ 11.20 ಮಿ.ಮೀ ವರ್ಷಧಾರೆಯಾಗಿದೆ. 

ಉಳಿದಂತೆ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಪ್ರದೇಶಗಳಾದ ಆಗುಂಬೆ, ನಗರ, ಮಾಸ್ತಿಕಟ್ಟೆ, ಹುಲಿಕಲ್ಲು, ಚಕ್ರಾ, ಸಾವೇಹಕ್ಲು ಡ್ಯಾಂ ವ್ಯಾಪ್ತಿಗಳಲ್ಲಿ ಉತ್ತಮ ವರ್ಷಧಾರೆಯಾಗುತ್ತಿರುವ ಮಾಹಿತಿಗಳು ಲಭ್ಯವಾಗಿದೆ. ಮತ್ತೊಂದೆಡೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಹೇಳಿವೆ. 

ಡ್ಯಾಂ ವಿವರ: ಜಲಾನಯನ ವ್ಯಾಪ್ತಿಯಲ್ಲಿ ಕ್ರಮೇಣ ಮಳೆ ಚುರುಕುಗೊಳ್ಳುತ್ತಿರುವುದರಿಂದ ಜಿಲ್ಲೆಯ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಕ್ರಮೇಣ ಹೆಚ್ಚಳವಾಗಲಾರಂಭಿಸಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 4917 ಕ್ಯೂಸೆಕ್ ಇದ್ದು, 1984 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 32.80 ಮಿ.ಮೀ. ಮಳೆಯಾಗಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1766.25 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು 1748.10 ಅಡಿಯಿತ್ತು. 

ಭದ್ರಾ ಡ್ಯಾಂನ ಒಳಹರಿವು 3537 ಕ್ಯೂಸೆಕ್ ಇದ್ದು, 215 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ವ್ಯಾಪ್ತಿಯಲ್ಲಿ 9 ಮಿ.ಮೀ. ವರ್ಷಧಾರೆಯಾಗಿದೆ. ಡ್ಯಾಂನ ನೀರಿನ ಮಟ್ಟ 141.10 (ಗರಿಷ್ಠ ಮಟ್ಟ : 186) ಅಡಿಯಿತ್ತು. ಕಳೆದ ವರ್ಷ ನೀರಿನ ಮಟ್ಟ 112.60 ಅಡಿಯಿತ್ತು. ಉಳಿದಂತೆ ತುಂಗಾ ಡ್ಯಾಂನ ನೀರಿನ ಮಟ್ಟ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿಗೆ ನೀರಿನ ಮಟ್ಟ ತಲುಪಿದ್ದು, ಡ್ಯಾಂಗೆ 2835 ಕ್ಯೂಸೆಕ್ ಒಳಹರಿವಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊಸಪೇಟೆಯ ಟಿ.ಬಿ.ಡ್ಯಾಂಗೆ ಹೊರ ಬಿಡಲಾಗುತ್ತಿದೆ. 

ಶಿವಮೊಗ್ಗ-ತೀರ್ಥಹಳ್ಳಿ-ಭದ್ರಾವತಿಯಲ್ಲಿ ವಾಡಿಕೆಗಿಂತ ಹೆಚ್ಚು
ಜೂನ್ ತಿಂಗಳ ಶಿವಮೊಗ್ಗ ಜಿಲ್ಲೆಯ ಏಳು ತಾಲೂಕು ಕೇಂದ್ರಗಳ ಸರಾಸರಿ ವಾಡಿಕೆ ಮಳೆ 390.67 ಮಿಲಿ ಮೀಟರ್ ಆಗಿದ್ದು, ಜೂ. 25 ರವರೆಗೆ 312.40 ಮಿ.ಮೀ. ಮಳೆ ಬಿದ್ದಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ತಾಲೂಕುಗಳಲ್ಲಿ ಜೂನ್ ತಿಂಗಳ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಉಳಿದಂತೆ ಸಾಗರ, ಸೊರಬ, ಶಿಕಾರಿಪುರ, ಹೊಸನಗರದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. 

ಶಿವಮೊಗ್ಗ ತಾಲೂಕು ಕೇಂದ್ರದ ವಾಡಿಕೆ ಮಳೆ (ವಾ. ಮ.) ಯು 133.10 ಮಿ.ಮೀ. ಆಗಿದ್ದು, ಜೂ. 25 ರವರೆಗೆ 164.40 ಮಿ.ಮೀ. ಆಗಿದೆ. ಉಳಿದಂತೆ ಭದ್ರಾವತಿ ವಾ. ಮ. 105.80 ಮಿ.ಮೀ ಆಗಿದ್ದು, 157.40 ಮಿ.ಮೀ. ವರ್ಷಧಾರೆಯಾಗಿದೆ. ತೀರ್ಥಹಳ್ಳಿ ವಾ. ಮ. 714.50 ಮಿ.ಮೀ. ಇದ್ದು, 812.60 ಮಿ.ಮೀ. ಮಳೆಯಾಗಿದೆ. ಸಾಗರದ ವಾ. ಮ. 630.60 ಮಿ.ಮೀ., ವರ್ಷಧಾರೆಯ ಪ್ರಮಾಣ 285.90, ಶಿಕಾರಿಪುರ ವಾ. ಮ. 146.60, ಬಿದ್ದ ಮಳೆ 117.60, ಸೊರಬದ ವಾ. ಮ. 324.00 ಮಿ.ಮೀ., ಬಿದ್ದ ಮಳೆ 175.50, ಹೊಸನಗರದ ವಾ. ಮಳೆ 680.10 ಮಿ.ಮೀ. ಆಗಿದ್ದು, 470 ಮಿ.ಮೀ. ವರ್ಷಧಾರೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News