ಶಿವಮೊಗ್ಗ: ಪಾಲಿಕೆ ವಾರ್ಡ್‍ವಾರು ಮೀಸಲಾತಿಗೆ ಆಕ್ಷೇಪ; ಮನವಿ ಅರ್ಪಣೆ

Update: 2018-06-25 14:35 GMT

ಶಿವಮೊಗ್ಗ, ಜೂ. 25: ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಕ್ಕೆ ಚುನಾವಣೆ ನಡೆಸಲು, ನಿಗದಿಪಡಿಸಲಾಗಿರುವ ವಾರ್ಡ್‍ವಾರು ಮೀಸಲಾತಿಯನ್ನು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದ ಜನಗಣತಿ ಆಧಾರದ ಮೇಲೆ ಪರಿಗಣಿಸುವಂತೆ ಆಗ್ರಹಿಸಿ, ಸೋಮವಾರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗವು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಅರ್ಪಿಸಿತು. 

ರಾಜ್ಯದ ಮಹಾನಗರಪಾಲಿಕೆ ಚುನಾವಣೆ ನಡೆಸಲು ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿರುವುದು ರೋಸ್ಟರ್ ಪದ್ದತಿಯೊಳಗೆ ಅನ್ವಯಿಸಿರುವುದಿಲ್ಲ. ರೋಸ್ಟರ್ ಪದ್ದತಿ ಪ್ರಕಾರ ಮೀಸಲಾತಿಯನ್ನು ಆಯಾ ಸಂಬಂಧಪಟ್ಟ ವಾರ್ಡ್‍ನ ಜನಗಣತಿ, ಜಾತಿ ಆಧಾರದ ಮೇಲೆ ಪ್ರತಿ 10 ವರ್ಷಕ್ಕೆ ಒಮ್ಮೆ ನಿಗದಿಪಡಿಸಲಾಗುತ್ತದೆ. ಆದರೆ 2018-19ನೇ ಸಾಲಿನ ಚುನಾವಣೆಗೆ ಮೀಸಲಾತಿ ಪಟ್ಟಿಯು ರೋಸ್ಟರ್ ಪದ್ದತಿಯನ್ನು ಪಾಲಿಸದೇ ನಿಗದಿಪಡಿಸಲಾಗಿದೆ ಎಂದು ಸಮಿತಿ ಆರೋಪಿಸಿದೆ. 

ಈ ಹಿಂದೆ 2011ರ ವಾರ್ಡ್‍ವಾರು ಮೀಸಲಾತಿಗೆ ಸಂಬಂಧಪಟ್ಟಂತೆ ಶಿವಮೊಗ್ಗ ನಗರದ ವಾರ್ಡ್ ನಂ.29 ಮತ್ತು 34 ರಲ್ಲಿ ಜನಗಣತಿ ಆಧಾರದ ಮೇಲೆ ನೀಡಲಾಗಿತ್ತು. ಆದರೆ ಇದೀಗ ವಾರ್ಡ್‍ನಲ್ಲಿ ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದ್ದು, ಇದು ನ್ಯಾಯಬದ್ದವಾಗಿರುವುದಿಲ್ಲ ಎಂದು ಸಮಿತಿ ಹೇಳಿದೆ. 

ಪ್ರಸ್ತುತ ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆಸಲು ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿರುವುದು ನ್ಯಾಯಸಮ್ಮತವಾಗಿರುವುದಿಲ್ಲ. ಆದ್ದರಿಂದ ಸದರಿ ಮೀಸಲಾತಿಯನ್ನು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನಗಣತಿ ಆಧಾರದ ಮೇಲೆ ನಿಗದಿಪಡಿಸಬೇಕೆಂದು ಸಮಿತಿ ಆಗ್ರಹಿಸಿದೆ. 

ಈ ಸಂದರ್ಭದಲ್ಲಿ ವಿಭಾಗದ ಪ್ರಮುಖರಾದ ಮಹಮ್ಮದ್ ಆರೀಫ್ ವುಲ್ಲಾ, ಇಮ್ತಿಯಾಜ್ ಖಾನ್, ಮೊಹಮ್ಮದ್ ಇಕ್ಬಾಲ್, ನಯಾಜ್ ಅಹಮ್ಮದ್, ಅಫ್ತಾಬ್ ಪರ್ವೀಜ್ ಮೊದಲಾದವರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News