ಚಿಕ್ಕಮಗಳೂರು: ಆನೆ ಹಾವಳಿ, ಅತಿವೃಷ್ಟಿ ಪೀಡಿತರಿಗೆ ಪರಿಹಾರ ನೀಡಲು ಸಂಸದೆ ಶೋಭಾ ಸೂಚನೆ

Update: 2018-06-25 14:55 GMT

ಚಿಕ್ಕಮಗಳೂರು, ಜೂ.25: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ರವಿವಾರ ಮೂಡಿಗೆರೆ ತಾಲೂಕು ವ್ಯಾಪ್ತಿಯ ಬಿದರಹಳ್ಳಿ, ಭೈರಾಪುರ, ಗುತ್ತಿ ಹಾಗೂ ಇತರ ಗ್ರಾಮಗಳಿಗೆ ಭೇಟಿ ನೀಡಿ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳ ಜನರ ಸಮಸ್ಯೆಗಳನ್ನು ಆಲಿಸಿ, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆಗಾರರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಮಾತನಾಡಿ, ವನ್ಯ ಜೀವಿ ವಿಭಾಗದ ಸಿ.ಸಿ.ಎಫ್ ಮನೋಜ್ ಕುಮಾರ್ ರವರಿಗೆ ಆನೆ ದಾಳಿ ತಡೆಯುವ ಬಗ್ಗೆ ಅಪಾರ ಜ್ಞಾನವಿದೆ. ಅವರನ್ನು ಬಳಸಿಕೊಂಡು ಶಾಶ್ವತವಾಗಿ ಮಲೆನಾಡು ಭಾಗದಲ್ಲಿ ಆನೆ ದಾಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಸಂಸದರು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಟ್ರಂಚ್ ಹಾಗೂ ಕಣಿವೆ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಬಳಸಿ ಆನೆಗಳು ರೈತರ ಜಮೀನಿಗೆ ಬರದಂತೆ ತಡೆಯಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕಳುಹಿಸಿಕೊಡುವಂತೆ ತಿಳಿಸಿದ ಅವರು, ಗ್ರಾಮ ಮಟ್ಟದಲ್ಲಿ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಉತ್ಸಾಹಿ ಯುವಕರ ಸಮಿತಿಯನ್ನು ರಚಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಅವರೊಡನೆ ಸಮನ್ವಯದಿಂದ ಕೆಲಸ ಮಾಡಿ ಆನೆಗಳನ್ನು ನಿಯಂತ್ರಿಸುವಂತೆ ಸೂಚಿಸಿದರು. 

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಮಲೆನಾಡು ಭಾಗದಲ್ಲಿ ಬಿಎಸ್ಸೆನ್ನೆಲ್ ಟವರ್ ಗಳ ಸಮಸ್ಯೆಗಳಿದ್ದು, ಕೂಡಲೇ ಪರಿಹರಿಸುವಂತೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಇಲಾಖಾ ಅಧಿಕಾರಿಗಳಿಗೆ ಶೀಘ್ರವಾಗಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. 
ಈ ಬಗ್ಗೆ ಬಿಎಸ್ಸೆನ್ನೆಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಪ್ರಸಕ್ತ  ಜಿಲ್ಲೆಯಲ್ಲಿ 104 - 3ಜಿ ಟವರ್ ಗಳಿದ್ದು, 66 - 2ಜಿ ಟವರ್ ಗಳನ್ನು 3ಜಿಗೆ ಉನ್ನತೀಕರಿಸುತ್ತಿರುವ ಕೆಲಸ ನಡೆಯುತ್ತಿದೆ. ಈ ಸಂಬಂಧ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವುದಾಗಿ ಸಭೆಗೆ ತಿಳಿಸಿದರು. 

ನಂತರ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳ ರಸ್ತೆ ಹಾಗೂ ಸೇತುವೆಗಳನ್ನು ತುರ್ತಾಗಿ ದುರಸ್ತಿಪಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಂಸದೆ ಶೋಭಾ, ಬೆಳೆ ನಷ್ಟವಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News