×
Ad

ಮಾಜಿ ಶಾಸಕ ಶ್ರೀನಿವಾಸ್‍ರಿಂದ ವ್ಯಾಪಕ ಭ್ರಷ್ಟಾಚಾರ: ಆರೋಪ

Update: 2018-06-25 20:29 IST

ತರೀಕೆರೆ, ಜೂ25: ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಕಳೆದ 5 ವರ್ಷದ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಶಾಸಕರಾದ ಎಸ್.ಎಂ.ನಾಗರಾಜ್ ಮತ್ತು ಟಿ.ಎಚ್.ಶಿವಶಂಕರಪ್ಪ ಆರೋಪಿಸಿದ್ದಾರೆ.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕರೆಯಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎಸ್.ಎಂ.ನಾಗರಾಜ್, ತಮ್ಮ ಅಧಿಕಾರವಧಿಯಲ್ಲಿ ಮಾಜಿ ಶಾಸಕ ಶ್ರೀನಿವಾಸ್ ಬಗರ್‍ಹುಕುಂ ಸಾಗುವಳಿ ನೀಡುವಲ್ಲಿ ಕಾನೂನನ್ನು ಗಾಳಿಗೆ ತೂರಿದ್ದಾರೆ. ತಾಲೂಕಿನ ಹೊರಗಿನವರಿಗೆ ಹಕ್ಕು ಪತ್ರ ನೀಡಿದ್ದಾರೆ. ಅಕ್ರಮವಾಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಅದರಲ್ಲಿ ಅವರ ಕುಟುಂಬದ ಸದಸ್ಯರಿಗೂ ಜಾಗ ಮಂಜೂರು ಮಾಡಿಸಿ ಪರವಾನಿಗೆ ಕೊಡಿಸಲಾಗಿದೆ. ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿ ಪರವಾನಿಗೆ ರದ್ದು ಮಾಡುವವರೆಗೂ ಹೋರಾಟ ಮಾಡಲಾಗುವುದು ಎಂದರು.

ಭೂಸೇನ ನಿಗಮ ಮತ್ತು ನಿರ್ಮಿತಿ ಕೇಂದ್ರದ ಮೂಲಕ ನಡೆಸಿದ ಅಭಿವೃದ್ದಿ ಕೆಲಸಗಳಲ್ಲಿ ಕಾಮಗಾರಿಗಳನ್ನು ನಡೆಸದೇ ಹಣ ಡ್ರಾ ಮಾಡಲಾಗಿದೆ. ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ಬಿಡುಗಡೆಯಾಗಿರುವ ಹಣ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಬರಗಾಲದ ಸಮಯದಲ್ಲಿ ಕುಡಿಯುವ ನೀರಿಗಾಗಿ ತಮ್ಮದೇ ಟ್ಯಾಂಕರ್ ಕಳುಹಿಸಿ ಸುಳ್ಳು ಲೆಕ್ಕ ತೋರಿಸಿ ಬಿಲ್ಲು ಮಾಡಿಕೊಳ್ಳಲಾಗಿದೆ. ಜಂಭದಹಳ್ಳ ಕಾಮಗಾರಿಯ ವಿಚಾರದಲ್ಲಿ ಹೆಚ್ಚುವರಿಯಾಗಿ 11 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿಕೊಂಡು ಹಣ ಲಪಟಾಯಿಸಲಾಗಿದೆ ಎಂದು ಶಾಸಕರು ಗಂಭೀರ ಆರೋಪ ಮಾಡಿದರು. 

ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಮಾತನಾಡಿ, ಗೂಂಡಾಗಿರಿ, ಬೋಗಸ್‍ ಬಿಲ್ಲು, ಗಲಾಟೆ, ದೌರ್ಜನ್ಯಗಳೇ ಮಾಜಿ ಶಾಸಕ ಜಿ.ಹೆಚ್.ಶ್ರೀನಿವಾಸ್‍ರವರ ಸಾಧನೆಯಾಗಿದೆ. ಕೆರೆಗಳ ಊಳು ತೆಗೆಯಲು ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿದೆ. ಪಟ್ಟಣದ ಪ್ರವಾಸಿ ಮಂದಿರದ ನವೀಕರಣಕ್ಕೆ 1 ಕೋಟಿ 37 ಲಕ್ಷ ಹಣ ಬಿಡುಗಡೆಯಾಗಿದ್ದು, ಅನುದಾನಕ್ಕೆ ತಕ್ಕ ಕೆಲಸಗಳು ನಡೆದಿಲ್ಲ. ಶಾಸಕರ ಕಚೇರಿ ಅಭಿವೃದ್ದಿ ಮಾಡಲಾಗಿದೆ ಎಂದು ಸ್ವಂತ ಮನೆಗೆ 10 ಲಕ್ಷ ರೂ. ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಅಭಿವೃದ್ದಿ ಕಾಮಗಾರಿಗೆ ಬಿಡುಗಡೆಯಾದ ಅನುದಾನದ ಕುರಿತು ಎಲ್ಲಾ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತಿದ್ದು, ಬೃಹತ್ ಹೋರಾಟ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎನ್.ರಾಜು, ಪುರಸಭಾ ಸದಸ್ಯರಾದ ಟಿ.ಎಸ್.ರಮೇಶ್, ಡಿ.ವಿ.ಪದ್ಮರಾಜ್, ಎಪಿಎಂಸಿ ಸದಸ್ಯ ಎಂ.ಕೃಷ್ಣಮೂರ್ತಿ, ಮುಖಂಡರಾದ ನಟರಾಜ್, ಚಂದ್ಪಪ್ಪ, ರಾಮಚಂದ್ರಪ್ಪ ಹಾಗೂ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News