ಮೈತ್ರಿ ಸರಕಾರದಲ್ಲಿ ಗೊಂದಲ: ಅಮಿತ್ ಶಾ ಭೇಟಿಗೆ ಬಿಎಸ್‌ವೈ ಅಹಮದಾಬಾದ್‌ಗೆ ದಿಢೀರ್ ದೌಡು

Update: 2018-06-25 15:26 GMT

ಬೆಂಗಳೂರು, ಜೂ. 25: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಪ್ರಸಕ್ತ ರಾಜಕೀಯ ಗೊಂದಲದ ಲಾಭ ಪಡೆದುಕೊಳ್ಳಲು ವಿಪಕ್ಷ ಬಿಜೆಪಿ ರಣತಂತ್ರ ರೂಪಿಸಿದ್ದು, ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಸೋಮವಾರ ಬೆಳಗ್ಗೆ ವಿಪಕ್ಷ ನಾಯಕರೂ ಆಗಿರುವ ಮಾಜಿ ಸಿಎಂ ಬಿಎಸ್‌ವೈ, ಅಧಿಕೃತ ಸರಕಾರಿ ಕಾರು ಮತ್ತು ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಏಕಾಂಗಿಯಾಗಿ ತನ್ನ ಆಪ್ತ ಬಸವರಾಜ ಬೊಮ್ಮಾಯಿ ಅವರೊಂದಿಗೆ ಖಾಸಗಿ ಕಾರಿನಲ್ಲಿ, ನಂತರ ವಿಮಾನದ ಮೂಲಕ ಗುಜರಾತ್‌ನ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆಂದು ಗೊತ್ತಾಗಿದೆ.

ಮೈತ್ರಿಕೂಟ ಸರಕಾರದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಯಾವ ರೀತಿ ಬಿಜೆಪಿ ಲಾಭ ಮಾಡಿಕೊಳ್ಳಲು ಸಾಧ್ಯವಿದೆ ಎಂಬ ಬಗ್ಗೆ ಅಮಿತ್ ಶಾ ಮತ್ತು ಯಡಿಯೂರಪ್ಪ ಚರ್ಚಿಸಿದ್ದಾರೆ. ಅಲ್ಲದೆ, ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ‘ಕೈ’ ಶಾಸಕರನ್ನು ಸೆಳೆದುಕೊಳ್ಳುವ ಕುರಿತು ಸಮಾಲೋಚನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಈ ಬೆಳವಣಿಗೆಗಳಿಗೆ ಪುಷ್ಟಿ ನೀಡುವಂತೆ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಸಿಎಂ ಕುಮಾರಸ್ವಾಮಿ, ‘ನಾನು ಯಾರೊಬ್ಬರ ಹಂಗಿನಲ್ಲಿಯೂ ಇಲ್ಲ. ನಾನು ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ’ ಎಂಬ ಹೇಳಿಕೆ ಗಮನಿಸಿದರೆ ಈ ಸರಕಾರದ ‘ಭವಿಷ್ಯ’ದ ಬಗ್ಗೆ ಸಂಶಯ ಸೃಷ್ಟಿಯಾಗಿದೆ. ಇದು ಬಿಜೆಪಿ ವಲಯದಲ್ಲಿ ಏಕಾಏಕಿ ಬಿರುಸಿನ ಚಟುವಟಿಕೆಗಳಿಗೆ ಕಾರಣವೂ ಆಗಿದೆ. ಕೇಂದ್ರ ನಾಯಕರ ಸಂಪರ್ಕದಲ್ಲಿರುವ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಭೇಟಿಗೆ ಅವಕಾಶವನ್ನೇ ನೀಡದ ಪ್ರಧಾನಿ ಮೋದಿ, ಎಚ್‌ಡಿಕೆ ದಿಲ್ಲಿಗೆ ಹೋದಾಗಲೆಲ್ಲ ಭೇಟಿಗೆ ಸಮಯ ನೀಡುತ್ತಿರುವುದು ಕುತೂಹಲ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News