ಹಿಂದೂಗಳ ರಕ್ತಪಾತಕ್ಕೆ ಕೆಲವು ಪಂಥಗಳು ಸಜ್ಜಾಗಿವೆ: ರಂಗಕರ್ಮಿ ಪ್ರಸನ್ನ

Update: 2018-06-25 16:29 GMT

ಬೆಂಗಳೂರು, ಜೂ.25: ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಿ, ಹಿಂದೂಗಳ ರಕ್ತಪಾತ ಮಾಡಲು ಕೆಲವು ಪಂಥಗಳು ಸಜ್ಜಾಗಿವೆ. ಈ ವ್ಯವಸ್ಥಿತ ಸಂಚಿಗೆ ತಡೆವೊಡ್ಡಬೇಕಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತ ಯಾತ್ರಾ ಕೇಂದ್ರ ಆಯೋಜಿಸಿದ್ದ, ‘ಮಾಜಿ ಪ್ರಧಾನಿ ಚಂದ್ರಶೇಖರ ಪಾದಯಾತ್ರೆ 35 ಹಾಗೂ ತುರ್ತು ಪರಿಸ್ಥಿತಿಯ ಕರಾಳ ನೆನಪು ಪ್ರಸ್ತುತ ರೂಪಾಂತರಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋಮುವಾದಿ ಪಕ್ಷವೊಂದು ತನ್ನ ಸ್ವಹಿತಾಸಕ್ತಿಗಾಗಿ ಹಿಂದೂ ರಾಷ್ಟ್ರವನ್ನಾಗಿಸಲು ಹವಣಿಸುತ್ತಿದೆ. ಇದಕ್ಕೆ ಸಂಘಟನೆಯೊಂದು ಸೈದ್ಧಾಂತಿಕವಾಗಿ ಬೆಂಬಲ ನೀಡುತ್ತಿದ್ದು, ಬುದ್ಧಿಜೀವಿಗಳು, ಪ್ರಗತಿಪರರು ಒಗ್ಗೂಡಿ ಜನತೆಯನ್ನು ಎಚ್ಚರಿಸಬೇಕಿದೆ ಎಂದು ತಿಳಿಸಿದರು.

ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾದರೆ ಹಿಂದುತ್ವದೊಳಗಿರುವ ಕೆಲವು ಪಂಥಗಳು ಉಪ ಜಾತಿಗಳ ನಡುವೆ ಸಂಘರ್ಷ ತಂದು ಇರಾನ್, ಅಫ್ಘಾನ್, ಪಾಕ್ ಮಾದರಿಯಲ್ಲಿ ರಕ್ತಪಾತ ನಡೆಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಂಡವಾಳ ಶಾಹಿಗಳಿಗೆ ದೇಶದಲ್ಲಿ ರಕ್ತ ಹರಿದರೂ ಚಿಂತೆಯಿಲ್ಲ. ತಮ್ಮ ಮಾರುಕಟ್ಟೆಯ ಹಿತಾಸಕ್ತಿಗೆ ಧಕ್ಕೆ ಆಗಬಾರದು ಎಂದು ಆಲೋಚಿಸುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೀರವ್ ಮೋದಿಯಂತಹ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ದೂರಿದರು.

ಕೋಮುವಾದಿಗಳು ಹಿಂದುತ್ವದ ಹೆಸರಲ್ಲಿ ಉಗ್ರ ಹಿಂದುತ್ವದ ಮೊರೆ ಹೋಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ವಿಚಾರವಾದಿಗಳು ತಮ್ಮ ಮಡಿವಂತಿಕೆ ಬಿಟ್ಟು ಧರ್ಮದ ನಿಜವಾದ ಆಸೆಯನ್ನು ಅರ್ಥೈಸಿಕೊಂಡು ಹಿಂದು ಧರ್ಮವನ್ನು ಶುದ್ಧೀಕರಿಸಬೇಕಾಗಿದೆ ಎಂದರು.

ಮಾಜಿ ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದ ಒಬ್ಬ ರಾಜಕಾರಣಿಯು ಇಂದು ಮಂತ್ರಿ ಆಗಿಲ್ಲ. ಕೇವಲ ಸರಕಾರ ಬದಲಾದರೆ ಸಾಲದು ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಶರಣರು, ಸಂತರು, ಸೂಫಿಗಳು ಕಟ್ಟಿದ ಒಗ್ಗಟ್ಟನ್ನು ಯಾವುದೇ ಒಂದು ಪಕ್ಷ ಒಡೆಯಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಡಾ.ಬಿ.ಎಲ್. ಶಂಕರ್, ಎಂ.ಎಸ್. ರಂಗನಾಥ್, ಚೈನ್ನೈನ ಬಾಲು, ಚಿಂತಕ ತುಮುರಿ ಶ್ರೀಧರ್, ರಂಗಕರ್ಮಿ ಕೆ.ವಿ. ನಾಗರಾಜ ಮೂರ್ತಿ ಸೇರಿ ಪ್ರಮುಖರಿದ್ದರು.

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತರುತ್ತೇವೆಂಬುದು ಮೂರ್ಖತನದ ಯೋಜನೆ. ಜಲಾಶಯದಿಂದ ನಗರಕ್ಕೆ 425 ಕಿ.ಮೀ. ದೂರವಿದ್ದು, ಭೂ ಭಾಗದಲ್ಲಿ ಸುಮಾರು 1 ಸಾವಿರ ಅಡಿಗಳ ವ್ಯತ್ಯಾಸವಿದೆ. ವಸ್ತು ಸ್ಥಿತಿ ಹೀಗಿರುವಾಗ, ರಾಜ್ಯ ಸರಕಾರ ಅಜೀಂ ಪ್ರೇಮ್‌ಜೀ, ನಾರಾಯಣ ಮೂರ್ತಿಯಂತಹ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ದುಬಾರಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
-ಪ್ರಸನ್ನ, ಹಿರಿಯ ರಂಗಕರ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News