ಮೈತ್ರಿ ಸರ್ಕಾರದಲ್ಲಿ ಮಾದಿಗರಿಗೆ ಅನ್ಯಾಯ: ಮಾಜಿ ಸಚಿವ ಹೆಚ್.ಆಂಜನೇಯ
ಹರಿಹರ,ಜೂ.25: ಮೈತ್ರಿ ಸರ್ಕಾರದಲ್ಲಿ ಎಲ್ಲಾ ಜಾತಿಯವರಿಗೂ ಅವಕಾಶ ದೊರೆತಿದ್ದು, ಆದರೆ, ಮಾದಿಗರಿಗೆ ಮಾತ್ರ ಅನ್ಯಾಯವಾಗಿದೆ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದು, ಸದ್ಯದಲ್ಲಿಯೇ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿದರು.
ಸೋಮವಾರ ಅವರು ನಗರದ ಹನಗವಾಡಿ ಗ್ರಾಮದ ಬಳಿ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠಕ್ಕೆ ಔಪಚಾರಿಕ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರವು ಸುಭದ್ರವಾಗಿದ್ದು, ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದೆ.
ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ರಾಜ್ಯದ ಜನತೆಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಶೂ ಭಾಗ್ಯಗಳಂತೆ ಸುಮಾರು 170 ಯೋಜನೆ ಜಾರಿಗೆಗೊಳಿಸಿ ಭಾರತದ ನಂ. 1 ಸರ್ಕಾರ ಎಂದು ಖ್ಯಾತಿ ಪಡೆದಿತ್ತು. ಮೈತ್ರಿ ಸರ್ಕಾರ ಸಹ ಕಳೆದ ಸರ್ಕಾರದ ಎಲ್ಲಾ ಯೋಜನೆ ಮುಂದುವರೆಸಿಕೊಂಡು ಹೋಗಲಿದೆ ಎಂದರು.
ರೈತರ ಸಾಲಮನ್ನಾ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಾ.ಮನಮೋಹನ್ ಸಿಂಗ್‍ರವರ ಕಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ರೈತರ ಸಾಲವನ್ನು ಸುಮಾರು 72ಸಾವಿರ ಕೋಟಿ ಮನ್ನಾ ಮಾಡಿದ್ದು, ಕಾಂಗ್ರೆಸ್ ಸರ್ಕಾರವಾಗಿದ್ದು, ಸಿದ್ದರಾಮಯ್ಯನವರು ಸಹಕಾರಿ ಸಂಘಗಳ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಈಗಲೂ ರೈತರ ಸಾಲಮನ್ನಾ ಮಾಡಲು ಸರ್ಕಾರ ಬದ್ಧವಾಗಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದ ಸಂದರ್ಭ ಎಲ್ಲಾ ಸಮಾಜದ ಮಠಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದ್ದು, ಈ ಪಂಚಮಸಾಲಿ ಪೀಠಕ್ಕೂ ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭ ವಚನಾನಂದ ಶ್ರೀಗಳು ಮಾಜಿ ಸಚಿವರಿಗೆ ಸನ್ಮಾನಿಸಿ, ಆಶೀರ್ವದಿಸಿದರು. ಜಿಪಂ ಸದಸ್ಯ ಕೆ.ಎಸ್. ಬಸವರಾಜ್, ನಗರಸಭೆ ಸದಸ್ಯ ಪಿ.ಎನ್. ವಿರೂಪಾಕ್ಷ ಇದ್ದರು.