ಜಿಲ್ಲೆಯ ಎಲ್ಲಾ ಕಾಲೇಜುಗಳಿಗೂ ಮೂಲಭೂತ ಸೌಕರ್ಯ: ಸಚಿವ ಹೆಚ್.ಡಿ. ರೇವಣ್ಣ
ಹಾಸನ,ಜೂ.25: ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡದೆ, ಖಾಸಗಿ ಆಸ್ಪತ್ರೆಗೆ ತಳ್ಳಿದರೆ ಮೊದಲು ಅಂತಹ ವೈದ್ಯರನ್ನು ಹೊರಗೆ ಹಾಕುವ ಚಿಕಿತ್ಸೆ ನಾನು ಕೊಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಖಡಕ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗುಣಮಟ್ಟದ ಚಿಕಿತ್ಸೆ ಹಾಸನದಲ್ಲಿಯೇ ದೊರೆಯುವಂತಾಗಬೇಕು. ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಇದರಲ್ಲಿ ಲೋಪ ಕಂಡು ಬಂದರೆ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆ ಗಳಿಗೆ ಕಳುಹಿಸಲಾಗುತ್ತಿದೆ. ನಿಮಗೆ ಏನೇ ಸೌಲಭ್ಯ ಬೇಕಾದರೂ ನಾನು ಕೊಡಿಸಲು ಸಿದ್ಧ. ಆದರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುವ ಚಾಳಿಬಿಡಿ ಎಂದು ಎಚ್ಚರಿಕೆ ನೀಡಿದರು.
135 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಯನ್ನು 7 ಅಂತಸ್ತಿಗೆ ಏರಿಸಲು ಯೋಚಿಸಲಾಗಿದ್ದು, 24 ಕೋಟಿ ರೂ ವೆಚ್ಚದಲ್ಲಿ ಮೆಡಿಕಲ್ ಕಾಲೇಜಿನ 1200 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುವುದು. ಅದರಲ್ಲಿ ಪಿಜಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಫ್ಯಾಮಿಲಿ ಬ್ಲಾಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಈಗಿರುವ ಆಸ್ಪತ್ರೆಯನ್ನು ಹೆಚ್ಚುವರಿಯಾಗಿ ಏಳು ಅಂತಸ್ತಿನ ಆಸ್ಪತ್ರೆಯನ್ನಾಗಿ ಮಾಡಲಾಗುತ್ತಿದ್ದು, ಇದಕ್ಕಾಗಿ 135 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಲಾಗಿದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಆಸ್ಪತ್ರೆಗೆ ಸಂಬಂಧಿಸಿದಂತೆ ವೈದ್ಯರ ಸೌಲಭ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಯಾವೊಬ್ಬ ವೈದ್ಯರಾದರೂ ಸೌಲಭ್ಯ ಇಲ್ಲ ಎಂಬ ಕಾರಣವೊಡ್ಡಿ ರೋಗಿಗಳನ್ನು ಖಾಸಗಿ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಳುಹಿಸಬಾರದು. 825 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಅಲ್ಲಿ ಉತ್ತಮವಾದ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಮತ್ತು ರಾಜ್ಯದ ಎಲ್ಲಾ ಕಾಲೇಜಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಾಣದ ನಕ್ಷೆ ವೀಕ್ಷಿಸಿ ಅಳತೆ ಮಾಡಿ ಗೆರೆ ಹಾಕಲಾಯಿತು. ಹಿಮ್ಸ್‍ನ ನಿರ್ದೇಶಕ ಡಾ.ರವಿಕುಮಾರ್, ಶಸ್ತ್ರ ಚಿಕಿತ್ಸಕ ಡಾ. ಕೆ. ಶಂಕರ್, ಆಡಳಿತಾಧಿಕಾರಿ ಚಿದಾನಂದ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.