ಮೈಸೂರು ಮಹಾನಗರ ಪಾಲಿಕೆ ವಾರ್ಡ್ ವಿಂಗಡಣೆ ಅವೈಜ್ಞಾನಿಕ: ಶಾಸಕ ರಾಮದಾಸ್ ಅರೋಪ

Update: 2018-06-25 17:15 GMT

ಮೈಸೂರು,ಜೂ.25: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿ ವಾರ್ಡ್‍ಗಳನ್ನು ವಿಂಗಡಣೆ ಮಾಡಲಾಗಿದೆ ಎಂದು ಶಾಸಕ ಎಸ್ ಎ.ರಾಮದಾಸ್ ಆರೋಪಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಿಂಗ್ ರಸ್ತೆಯಲ್ಲಿರುವ ವ್ಯಾಪ್ತಿಯನ್ನು ಪಾಲಿಕೆ ವ್ಯಾಪ್ತಿಗೆ ತರಲಾಗಿದೆ. ಸರ್ಕಾರಕ್ಕೆ ಮಾಹಿತಿ ನೀಡಿ ನಂತರ ವಿಂಗಡಣೆ ಮಾಡಬೇಕಿದೆ. ಆದರೆ ಇದೆಲ್ಲವನ್ನು ಯಾವುದೇ ಮಾಹಿತಿ ನೀಡದೆ ಪಾಲಿಕೆ ವಿಂಗಡಿಸಿದೆ ಎಂದು ಪಾಲಿಕೆ ಅಧಿಕಾರಿಗಳ ವರ್ತನೆಗೆ ಕಿಡಿ ಕಾರಿದರು.

ಕೆ.ಆರ್.ವ್ಯಾಪ್ತಿಯಲ್ಲಿರುವ ವಾರ್ಡ್, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹಾಕಲಾಗಿದೆ. ಚಾಮುಂಡೇಶ್ವರಿ ವ್ಯಾಪ್ತಿಯದ್ದು, ಕೆ.ಆರ್ ಕ್ಷೇತ್ರಕ್ಕೆ ಬಂದಿದೆ. ಇದೆಲ್ಲವೂ ಕೂಡ ಅವೈಜ್ಞಾನಿಕವಾಗಿ ಮಾಡಲಾಗಿದೆ. ಜಿಲ್ಲಾಧಿಕಾರಿಯವರನ್ನು ಈ ಬಗ್ಗೆ ಕೇಳಿದರೆ ಮಾಹಿತಿ ಇಲ್ಲ ಅಂತಾರೆ. ಜನಗಣತಿ ಆಧಾರದ ಮೇಲೆ ಮಾಹಿತಿ ಕೊಡಿ ಅಂತ ಕೇಳಿದೆ. ಆದರೆ ಮೂರು ದಿನ ಸಮಯ ತೆಗೆದುಕೊಂಡು ನಂತರ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಯಾವ ಆಧಾರದ ಮೇಲೆ ವಾರ್ಡ್ ವಿಂಗಡಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. 

ಇಂದು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸುತ್ತಿದ್ದೇವೆ. ದಲಿತ ಬಂಧುಗಳು ಇರುವ ಜಾಗದಲ್ಲಿ ಸಾಮಾನ್ಯ ವಾರ್ಡ್ ಮಾಡಲಾಗಿದೆ. ಬ್ರಾಹ್ಮಣ ಇರುವ ಜಾಗದಲ್ಲಿ ಮೀಸಲಾತಿ ನೀಡಲಾಗಿದೆ. ಹಾಗಾಗಿ ನಾನೂ ಸೇರಿ 50 ಮಂದಿ ಆಕ್ಷೇಪಣೆ ಸಲ್ಲಿಸುತ್ತೇವೆ. ಜಿಲ್ಲಾಧಿಕಾರಿಯವರಿಗೆ ಈ ಕೂಡಲೇ ಆಕ್ಷೇಪಣೆ ಪತ್ರ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಬಿ.ವಿ.ಮಂಜುನಾಥ್, ರಾಜೇಂದ್ರ ಮಾಧ್ಯಮ ಸಂಚಾಲಕ ಪ್ರಭಾಕರ ಶಿಂಧೆ, ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News