ಚಿಕ್ಕಮಗಳೂರು: ಅಕ್ರಮ ಕಟ್ಟಡಗಳ ತೆರವಿಗೆ ಒತ್ತಾಯಿಸಿ ಕರವೇ ಧರಣಿ
ಚಿಕ್ಕಮಗಳೂರು, ಜೂ.25: ನಗರದಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಸೋಮವಾರ ನಗರದ ನಿರ್ಮಾಣ ಹಂತದ ರೆಸ್ಟೋರೆಂಟ್‍ವೊಂದಕ್ಕೆ ಮುತ್ತಿಗೆ ಹಾಕಿದ್ದಲ್ಲದೇ ಹನುಮಂತಪ್ಪ ಸರ್ಕಲ್‍ನಲ್ಲಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸತ್ಯವತಿಯವರು ಚಿಕ್ಕಮಗಳೂರು ನಗರದಲ್ಲಿ ಯಾವುದೇ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಟ್ಟಿಲ್ಲ. ಅಲ್ಲದೇ ಅಕ್ರಮ ಕಟ್ಟಡಗಳ ಕಾಮಗಾರಿಗೆ ತಡೆ ನೀಡಿದ್ದರು. ಆದರೆ ಹಿಂದಿನ ಡಿಸಿ ಸತ್ಯವತಿ ವರ್ಗಾವಣೆಗೊಂಡ ತಕ್ಷಣ ಮತ್ತೆ ನಗರದಲ್ಲಿ 15 ಅಕ್ರಮ ಕಟ್ಟಡಗಳು ರಾಜಾರೋಷವಾಗಿ ನಿರ್ಮಾಣವಾಗುತ್ತಿದೆ, ಸಾರ್ವಜನಿಕ ಹಿತ ದೃಷ್ಠಿಯಿಂದ ಚಿಕ್ಕಮಗಳೂರು ನಗರ ತುಂಬಾ ಇಕ್ಕಟ್ಟಾದ ನಗರ ಇಂತಹ ಸಂದರ್ಭದಲ್ಲಿ ಐ.ಜಿ.ರಸ್ತೆ, ಹನುಮಂತಪ್ಪ ವೃತ್ತದ ಹತ್ತಿರ, ಆರ್.ಜಿ.ರಸ್ತೆಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದು ಸಂಶಯಕ್ಕೆ ದಾರಿಯನ್ನುಂಟುಮಾಡಿದೆ. ಈ ತಕ್ಷಣ ನಗರದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಹಾಗೂ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಟ್ಟ ಅಧಿಕಾರಗಳ ವಿರುದ್ಧ ಶಿಸ್ತು ಬದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ರಾಮನಹಳ್ಳಿಯ ಗಿರಿಗಂಗೋತ್ರಿ ಶಾಲೆಯ ಎದುರು ಅಕ್ರಮ ಕಟ್ಟಡಗಳು ರಾಜಾರೋಷವಾಗಿ ನಿರ್ಮಾಣವಾಗುತ್ತಿದ್ದು, ಇವುಗಳನ್ನು ಸಹ ಅಧಿಕಾರಿಗಳು ತಡೆ ಹಿಡಿಯದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಇದಕ್ಕೂ ಮೊದಲು ನಗರದ ಎಂಜಿ ರಸ್ತೆಯಲ್ಲಿರುವ ನಿರ್ಮಾಣ ಹಂತದ ರೆಸ್ಟೋರೆಂಟ್‍ವೊಂದಕ್ಕೆ ಮುತ್ತಿಗೆ ಹಾಕಿದ ಕರವೇ ಕಾರ್ಯಕರ್ತರು, ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಟ್ಟಡ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಕರವೇ ಕಾರ್ಯಕರ್ತರನ್ನು ತಡೆದರು.
ಧರಣಿಯಲ್ಲಿ ಕರವೇ ಯುವ ಘಟಕದ ಅಧ್ಯಕ್ಷ ಮಂಜುನಾಥ್, ನಗರಾಧ್ಯಕ್ಷ ಧಾನೇಶ್, ಉಪಾಧ್ಯಕ್ಷ ರಘು, ಪ್ರಕಾಶ್, ಕುಮಾರ್ ಉಪಸ್ಥಿತರಿದ್ದರು.