ಸಹಾಯಕ ಇಂಜಿನಿಯರ್ ಅಮಾನತಿಗೆ ಆಗ್ರಹ: ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ದ.ಕೊಡಗು ಗ್ರಾಮಸ್ಥರು
ಮಡಿಕೇರಿ ಜೂ.25: ಚೆಸ್ಕಾಂನ ಬಾಳೆಲೆ ಕಾರ್ಯಪಾಲನಾ ಶಾಖೆಯ ಸಹಾಯಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಆ ಭಾಗದ ಗ್ರಾಮಸ್ಥರು ಬಾಳೆಲೆ ಚೆಸ್ಕಾಂ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಅವರ ನೇತೃತ್ವದಲ್ಲಿ ಬಾಳೆಲೆ ಹೋಬಳಿಯ ದೇವನೂರು, ಸುಳುಗೋಡು, ಬೆಳ್ಳೂರು, ಮಲ್ಲೂರು, ನಿಟ್ಟೂರು, ಕೊಟ್ಟಗೇರಿ, ಕಾರ್ಮಾಡು, ದೇವನೂರು ಸೇರಿದಂತೆ ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಹಾಯಕ ಇಂಜಿನಿಯರ್ ಕಾರ್ಯ ವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೇಲಧಿಕಾರಿಗಳನ್ನು ನಿರ್ಲಕ್ಷಿಸಿ ಸ್ವಇಚ್ಛೆಯಿಂದ ಕಾರ್ಯನಿರ್ವಹಿಸುವ ಇಂಜಿನಿಯರ್ ಗ್ರಾಮಸ್ಥರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಇಂಜಿನಿಯರ್ ನಮಗೆ ಬೇಡ. ಇವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಅರಮಣಮಾಡ ರಂಜನ್ ಅವರು, ಬಾಳೆಲೆ ಚೆಸ್ಕಾಂ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ತಮ್ಮ ಅಧಿಕಾರವಧಿಯಲ್ಲಿ ಗ್ರಾಮದಲ್ಲಿ ನೂರಾರು ವಿದ್ಯುತ್ ಕಂಬಗಳನ್ನು ಮತ್ತು ಟ್ರಾನ್ಸ್ ಫಾರ್ಮರ್‍ಗಳನ್ನು ಅಳವಡಿಸಿ ಗ್ರಾಮಸ್ಥರಿಂದಲೇ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಪ್ರತಿ ಕಂಬ ಅಳವಡಿಸಲು 10 ಸಾವಿರ ರೂಪಾಯಿಯಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಗ್ರಾಮಸ್ಥರೇ ಆದ ಮಲಚೀರ ಸಂಜು ಅವರಿಂದ ಒಂದು ಲಕ್ಷ ಹಣ ಪಡೆದುಕೊಂಡ ಆರೋಪ ಇವರ ಮೇಲಿದ್ದು, ಚೆಕ್ ರೂಪದಲ್ಲೇ ಹಣ ಪಡೆದಿದ್ದಾರೆ. ಗ್ರಾಮಸ್ಥರಿಂದ ಲಂಚದ ರೂಪದಲ್ಲಿ ಪಡೆದ ಹಣದಿಂದ ತಿತಿಮತಿ ಸಮೀಪದ ಭದ್ರಗೊಳದಲ್ಲಿ ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವ ಮನೆ ನಿರ್ಮಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಸಹಾಯಕ ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆರ್.ಎಂ.ಸಿ ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಗ್ರಾಮದಲ್ಲಿ ಮೀಟರ್ ಗಳನ್ನು ಅಳವಡಿಸಿದ್ದರೂ, ಬಹಳಷ್ಟು ಮಂದಿಗೆ ಆರ್.ಆರ್ ನಂಬರನ್ನು ನೀಡಿಲ್ಲ. ಅಂತಹ ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಣ ನೀಡಿದವರಿಗೆ ಮಾತ್ರ ಕೆಲಸ ಬೇಗನೆ ನಡೆಯುತ್ತದೆ. ಹಣ ನೀಡದೆ ಪ್ರಶ್ನೆ ಮಾಡಿದವರ ವಿರುದ್ಧ ಪಿತೂರಿ ನಡೆಸುವ ಇಂಜಿನಿಯರ್ ಇಲಾಖೆಯ ವಿಜಿಲೆನ್ಸ್ ನವರಿಗೆ ದೂರು ನೀಡಿ, ಅಮಾಯಕರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ವಿರುದ್ಧ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ಆರೋಪದಡಿ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮಸ್ಥರಿಂದ ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸುವ ವ್ಯವಸ್ಥೆಯನ್ನು ಮೇಲಧಿಕಾರಿಗಳು ಮಾಡಬೇಕು ಎಂದು ಆಗ್ರಹಿಸಿದರು.
ಕೋಣನಕಟ್ಟೆ ಗ್ರಾಮಸ್ಥರಿಂದ ಹಣ ಪಡೆದು ಬಾಳೆಲೆಯ ಮೂಲಕ ಹಾದು ಹೋಗಬೇಕಾದ ಎಕ್ಸ್‍ಪ್ರೆಸ್ ವೇ ಕೇಬಲನ್ನು ಪೊನ್ನಪ್ಪಸಂತೆ ಜಂಕ್ಷನ್‍ನಿಂದ ಕೋಣನಕಟ್ಟೆ ಮಾರ್ಗವಾಗಿ ಕೊಂಡೊಯ್ಯುವಂತೆ ಮಾಡಿದ್ದಾರೆ. ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ತಾನೇ ಸ್ವಇಚ್ಛೆಯಿಂದ ಈ ಕಾರ್ಯವನ್ನು ಮಾಡಿದ್ದಾರೆ. ಎಫ್2 ಫೀಡರ್ ನಿಂದ ಪೊನ್ನಂಪೇಟೆ ಕಿರುಗೂರು, ನಲ್ಲೂರು, ಪೊನ್ನಪ್ಪಸಂತೆ, ಕೈನಾಟಿ ಹಾಗೂ ಬಾಳೆಲೆ ಕೊಡವ ಸಮಾಜದವರೆಗೆ ಎಕ್ಸ್‍ಪ್ರೆಸ್ ವೇ ಕೇಬಲ್ ಹಾಕಲು ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಸಹಾಯಕ ಇಂಜಿನಿಯರ್ ಸೋಮೇಶ್ ಸ್ವ ಇಚ್ಛೆಯಿಂದ ಪೊನ್ನಪ್ಪಸಂತೆ ಜಂಕ್ಷನ್‍ನಿಂದ ಕೋಣನಕಟ್ಟೆ ಮಾರ್ಗವಾಗಿ 17.9 ಮೀಟರ್ ನಷ್ಟು ದೂರಕ್ಕೆ ಪಿ.ಸಿ.ಸಿ. ಕಂಬಗಳನ್ನು ಹಾಕಿ ಎಕ್ಸ್‍ಪ್ರೆಸ್ ಕೇಬಲನ್ನು ಪೊನ್ನಪ್ಪಸಂತೆ ಜಂಕ್ಷನ್‍ನಿಂದ ಕೋಣನಕಟ್ಟೆ ಮಾರ್ಗವಾಗಿ ಕೊಂಡೊಯ್ಯಲು ಕ್ರಮ ಕೈಗೊಂಡಿದ್ದಾರೆ ಎಂದ ಅವರು ಇದಕ್ಕೆ ಬಾಳೆಲೆ ಗ್ರಾಮಸ್ಥರ ತೀವ್ರ ವಿರೋಧವಿದೆ ಎಂದು ತಿಳಿಸಿದರು.
ಸಹಾಯಕ ಇಂಜಿನಿಯರ್ ಅವರೊಂದಿಗೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈನ್‍ಮಾನ್‍ವೊಬ್ಬರನ್ನು ವರ್ಗಾವಣೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾ.ಪಂ. ಸದಸ್ಯರುಗಳಾದ ಕೊಕ್ಕೆಂಗಡ ರಂಜನ್, ಚಕ್ಕೇರ ಸೂರ್ಯ, ಆರ್.ಎಂ.ಸಿ. ಸದಸ್ಯ ಸುಜಾ ಪೂಣಚ್ಚ, ಗ್ರಾಮಸ್ಥರಾದ ಚಿಮ್ಮಣಿಮಾಡ ಕೃಷ್ಣ, ಜ್ಯೋತಿ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.