ತುಮಕೂರು: ಮಕ್ಕಳ ಸಮಸ್ಯೆಗಳ ಕುರಿತ ಅಹವಾಲು ಕಾರ್ಯಕ್ರಮ
ತುಮಕೂರು,ಜೂ.25: ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಸಲಹಾ ಪೆಟ್ಟಿಗೆ, ವಿದ್ಯಾರ್ಥಿಗಳಿಗಾಗಿ ವಿವಿಧ ಇಲಾಖೆಗಳಲ್ಲಿ ಕಲ್ಯಾಣ ಯೋಜನೆಗಳ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾಕೊಳ್ಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಬಾಲಭವನದಲ್ಲಿಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 'ನಿಮ್ಮ ಕೋರಿಕೆ ನಮ್ಮ ಕರ್ತವ್ಯ' ಮಕ್ಕಳ ಸಮಸ್ಯೆಗಳ ಕುರಿತ ಅಹವಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಬಗ್ಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆಯೋಗದ ವತಿಯಿಂದ ಇಂತಹ ಅಹವಾಲು ಕಾರ್ಯಕ್ರಮಗಳನ್ನು ಪ್ರತಿ ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಬೇಕಾಗಿದ್ದು ಆಯೋಗ ಮತ್ತು ಇಲಾಖೆಗಳ ಕರ್ತವ್ಯವಾಗಿದೆ. ಮಕ್ಕಳಿಗೆ ಸರಕಾರದಿಂದ ನೀಡುತ್ತಿರುವ ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದುದರಿಂದ ಪ್ರತಿ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಸಲಹಾ ಪಟ್ಟಿಗೆ, ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಬಗ್ಗೆ, ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸಿಇಓ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ವಿಕಲಚೇನತರು, ಮಕ್ಕಳು, ಮಹಿಳೆಯರಿಗೆ ಇರುವ ಸರಕಾರದ ಹಲವಾರು ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಟಾನಗೊಳಿಸ ಲಾಗುತ್ತಿದೆ. ಚುನಾವಣಾ ಸಂದರ್ಭದಲ್ಲಿ ವಿಕಲಚೇತನರು ಮತದಾನದಿಂದ ವಂಚಿತರಾಗದಂತೆ ತಡೆಯಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನ ನಡೆಸಿ ಮತದಾರರ ಪೆಟ್ಟಿಗೆ ಸೇರ್ಪಡೆ ಮಾಡಿ, ಮತ ಚಲಾಯಿಸಲು ಅನುಕೂಲ ಕಲ್ಪಿಸಲಾಯಿತು ಎಂದು ತಿಳಿಸಿದರು.
ಮಕ್ಕಳ ಸಮಸ್ಯೆಗಳ ಬಗ್ಗೆ ಅಹವಾಲು ಕೇಳುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಗದ ವತಿಯಿಂದ ಏರ್ಪಡಿಸಿದ್ದು, ಸಂತೋಷದ ಸಂಗತಿಯಾಗಿದೆ. ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ವಿಶೇಷ ಅಭಿಯಾನವನ್ನು ಕೈಗೊಂಡು ಮಕ್ಕಳನ್ನು ಶಾಲೆಗೆ ದಾಖಲು ಮಾಡಲಾಗಿದೆ.ಅಗತ್ಯವಿದ್ದರೆ ಮತ್ತೊಮ್ಮೆ ಇದೇ ರೀತಿಯ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಸಿಇಓ ತಿಳಿಸಿದರು.
ಸಿದ್ಧಗಂಗಾ ಅಂಧರ ಶಾಲೆಯಿಂದ ಆಗಮಿಸಿದ್ದ ಮಂಜುಳ ಎನ್ನುವ ವಿದ್ಯಾರ್ಥಿನಿ ಮಾತನಾಡಿ, ಎಲ್ಲ ವಿಕಲಚೇತನರಿಗೂ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಯಾವುದೇ ವಿಕಲಚೇತನರು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮವಹಿಸಬೇಕು ಎಂದು ಸಮಿತಿಯ ಮುಂದೆ ಒತ್ತಾಯಿಸಿದಳು.
ಶೂನ್ಯ ಮೊತ್ತದಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಬ್ಯಾಂಕಿನಲ್ಲಿ ತೆಗೆದಿದ್ದ ಖಾತೆಯಲ್ಲಿ ಒಂದು ಸಾವಿರದಿಂದ ಒಂದೂವರೆ ಸಾವಿರದವರೆಗೆ ಕನಿಷ್ಟ ಮೊತ್ತವನ್ನು ಕಾಯ್ದುಕೊಳ್ಳುವಂತೆ ಬ್ಯಾಂಕಿನವರು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳಾದ ನಾವು ಹೇಗೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಲಿ ಎಂದು ಮೌಲಾನ ಅಜಾದ್ ಮಾದರಿ ಶಾಲೆಯ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ, ಸದರಿ ಬ್ಯಾಂಕಿಗೆ ಆಯೋಗದ ವತಿಯಿಂದ ಪತ್ರ ಬರೆದು ಸರಿಪಡಿಸಲಾಗುವುದು ಎಂದು ಆಯೋಗದ ಸದಸ್ಯರು ತಿಳಿಸಿದರು.
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶೌಚಾಲಯ, ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಆಯೋಗದ ಸದಸ್ಯರು ಹಾಗೂ ಅಧಿಕಾರಿಗಳ ಮುಂದೆ ಹಾಕಿ, ಉತ್ತರ ಪಡೆದುಕೊಂಡರು.
ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹೆಚ್.ಎಸ್.ಪರಮೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ದೇವರಾಜು, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ಕೆ.ಕರಂಗಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಚಂದ್ರಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ., ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ರಮೇಶ್, ಶಿಕ್ಷಣ ಇಲಾಖೆಯ ಬಂಡೀವೀರಪ್ಪ ಮತ್ತಿತರರು ಹಾಜರಿದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಬ್ಬೂರು, ಚಿಕ್ಕಗುಡ್ಡ, ಗೂಳೂರು ಹಾಗೂ ಕೋಡಿ ಮುದ್ದನಹಳ್ಳಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ತಿಮ್ಮಸಂದ್ರ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.