ಗರ್ಭಿಣಿಯರ ಆರೋಗ್ಯ ಕಾಪಾಡಬೇಕಾಗಿದೆ

Update: 2018-06-25 18:33 GMT

ಮಾನ್ಯರೇ,

ದಕ್ಷಿಣ ಭಾರತದ ರಾಜ್ಯಗಳಲ್ಲಿಯೇ ಹೆರಿಗೆ ಸಮಯದಲ್ಲಿ ಗರ್ಭಿಣಿಯರು ಮತ್ತು ಶಿಶುಗಳು ಹೆಚ್ಚು ಮರಣ ಹೊಂದುತ್ತಿರುವಲ್ಲಿ ಕರ್ನಾಟಕ ಮೇಲಿನ ಸ್ಥಾನದಲ್ಲಿದೆ ಎಂಬುದು ಅತ್ಯಂತ ನೋವಿನ ಸಂಗತಿ. ಅದರಲ್ಲೂ ಉತ್ತರ ಕರ್ನಾಟಕದ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾಣಂತಿಯರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ (2017-18) ನಲವತ್ತಕ್ಕೂ ಅಧಿಕ ಗರ್ಭಿಣಿಯರು ಹೆರಿಗೆ ಮಾಡಿಸುವ ವೇಳೆ ಮರಣ ಹೊಂದಿದ್ದಾರೆ. ಇನ್ನ್ನು 573 ಶಿಶುಗಳು ಹುಟ್ಟುತ್ತಲೇ ಸಾವನ್ನಪ್ಪಿದರೆ, 816 ನವಜಾತ ಶಿಶುಗಳು ಜನಿಸಿದ ನಂತರದಲ್ಲಿ ಮರಣ ಹೊಂದಿವೆ. ಇದು ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದು ಗರ್ಭಿಣಿಯರಲ್ಲಿ ಆತಂಕ ಮತ್ತು ಭಯ ಉಂಟು ಮಾಡಿದೆ.
ಸರಕಾರ ಗರ್ಭಿಣಿ ಮತ್ತು ಮಗು ಆರೋಗ್ಯದಿಂದ ಇರಲು ಸಾಕಷ್ಟು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಗ್ರಾಮೀಣ ಜನರಲ್ಲಿ ಶಿಕ್ಷಣ ಮತ್ತು ಮಾಹಿತಿಯ ಕೊರತೆಯಿಂದ ಗರ್ಭಿಣಿಯರ ಬಗ್ಗೆ ಅಷ್ಟೇನೂ ಕಾಳಜಿ ವಹಿಸದೇ ನಿರ್ಲಕ್ಷ ಮಾಡುವುದರಿಂದ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಗರ್ಭಿಣಿಯರಲ್ಲಿ ರಕ್ತ ಹೀನತೆ, ಪೌಷ್ಟಿಕಾಂಶದ ಕೊರತೆಯಿಂದಾಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಬೇಕಾದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಗರ್ಭಿಣಿ ಮತ್ತು ಶಿಶುಗಳ ಮರಣ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಸರಕಾರ ಮತ್ತು ಆರೋಗ್ಯ ಇಲಾಖೆ ಗರ್ಭಿಣಿಯರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳ ಗರ್ಭಿಣಿ ಮತ್ತು ಪಾಲಕರಲ್ಲಿ ಗರ್ಭಿಣಿಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕು. ಅಲ್ಲದೇ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಬೇಕಾದ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆಗ ಮಾತ್ರ ನಮ್ಮ ಕರ್ನಾಟಕ ರಾಜ್ಯದಲ್ಲಿ ಗರ್ಭಿಣಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಂಭೀರವಾಗಿ ಚಿಂತಿಸಬೇಕಿದೆ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News