ಆರ್ ಟಿಐ ಮಾಹಿತಿ ಪಡೆದದ್ದಕ್ಕಾಗಿ ಯುವಕನನ್ನು ಗುಂಡಿಕ್ಕಿ ಕೊಂದ ಗ್ರಾಮ ಸರಪಂಚ

Update: 2018-06-26 13:37 GMT

ರೋಹ್ಟಕ್, ಜೂ.26:  ಸೋನೆಪತ್ ಜಿಲ್ಲೆಯ ಪಿಪ್ಲಿ ಗ್ರಾಮದ ಸರಪಂಚನೊಬ್ಬ ತನ್ನ ವಿರುದ್ಧದ ಕೆಲ ಮಾಹಿತಿಗಳನ್ನು ಆರ್ ಟಿಐ ಮೂಲಕ ಪಡೆದಿದ್ದಾನೆಂಬ ಶಂಕೆಯಿಂದ 24 ವರ್ಷದ ಯುವಕನೊಬ್ಬನನ್ನು ಗುಂಡಿಕ್ಕಿ ಸಾಯಿಸಿದ್ದಾನೆ.

ಮೃತ ಯುವಕ ಆಶಿಶ್ ದಹಿಯಾ ತನ್ನ ಸೋದರ ಸಂಬಂಧಿಯೊಂದಿಗೆ ಗ್ರಾಮದ ಪಕ್ಕದ ಜಿಮ್ ನಲ್ಲಿದ್ದಾಗ ಈ ಘಟನೆ ನಡೆದಿದೆ. ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ವಿರುದ್ಧ ಸರಪಂಚ ರಾಮ್ ನಿವಾಸ್ ಒಂದು ತಿಂಗಳ ಅವಧಿಯಲ್ಲಿ ನಡೆಸಿದ ಎರಡನೇ ದಾಳಿ ಇದಾಗಿದೆ.

ಎರಡು ವಾರಗಳ ಹಿಂದೆ ಸರಪಂಚ ಆಶಿಷ್ ಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ ಎಂದು ಆತನ ಜತೆಗಿದ್ದ  ಆತನ ಸೋದರ ಸಂಬಂಧಿ ಆಕಾಶ್ ಆರೋಪಿಸಿದ್ದಾನೆ. ಈ ಬೆದರಿಕೆ ಬಗ್ಗೆ ಪೊಲೀಸರ ದೂರು ನೀಡಲಾಗಿತ್ತು. ಆಕಾಶ್ ಮತ್ತು ಆಶಿಷ್  ತಮ್ಮ ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದರು.

ಆರೋಪಿ ಸರಪಂಚ ಜೂನ್ 12ರಂದು ಇನ್ನೊಬ್ಬ ಆರ್ ಟಿಐ ಅರ್ಜಿದಾರ ರಾಮವತಾರ್ ಸಿಂಗ್ ಮೇಲೆ ಗುಂಡು ಹಾರಿಸಿದ್ದರೂ ಆತ ಬಚಾವಾಗಿದ್ದ. ತನ್ನ ಜಮೀನಿನ ಸ್ವಲ್ಪ ಭಾಗವನ್ನು ಸರಪಂಚ ಕಬಳಿಸಿದ ಬಳಿಕ ಸಿಂಗ್ ಆರ್ ಟಿಐ ಮಾಹಿತಿ ಕೋರಿದ್ದರು. ಈ ಸಂದರ್ಭ ಇನ್ನೊಬ್ಬ ಸ್ಥಳೀಯ ಯುವಕ ಪ್ರದೀಪ್ ಕೂಡ ಆರ್ ಟಿಐ ಅರ್ಜಿ ಸಲ್ಲಿಸಿದ್ದ. ಆತನನ್ನು ಆಶಿಷ್ ಮತ್ತು ಆಕಾಶ್ ಬೆಂಬಲಿಸಿದ್ದರು. ಇದರಿಂದ ಸರಪಂಚ ಕೋಪಗೊಂಡಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News