ಪಾಕ್‌ನ ಪೊಳ್ಳು ಭಾವಾವೇಶ ಕಾಶ್ಮೀರದ ವಾಸ್ತವ ಬದಲಿಸದು: ವಿಶ್ವಸಂಸ್ಥೆಯಲ್ಲಿ ಭಾರತ

Update: 2018-06-26 17:08 GMT

ವಿಶ್ವಸಂಸ್ಥೆ, ಜೂ. 26: ನೀವು ಎಷ್ಟೇ ಪೊಳ್ಳು ಭಾವಾವೇಶದ ಮಾತುಗಳನ್ನು ಆಡಿದರೂ, ಜಮ್ಮು ಮತ್ತು ಕಾಶ್ಮೀರವು ಭಾರತದ ‘ಬೇರ್ಪಡಿಸಲಾಗದ’ ಭಾಗ ಎಂಬ ವಾಸ್ತವ ಬದಲಾಗುವುದಿಲ್ಲ ಎಂದು ಭಾರತ ಪಾಕಿಸ್ತಾನಕ್ಕೆ ಹೇಳಿದೆ.

ವಿಶ್ವಸಂಸ್ಥೆಯ ಮಹಾಧಿವೇಶನದ ಚರ್ಚೆಯೊಂದರಲ್ಲಿ ಪಾಕಿಸ್ತಾನಿ ರಾಯಭಾರಿಯು ಕಾಶ್ಮೀರದ ಪ್ರಸ್ತಾಪ ಮಾಡಿದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.

‘ಜನಾಂಗೀಯ ಹತ್ಯೆ, ಯುದ್ಧಾಪರಾಧಗಳು, ಜನಾಂಗೀಯ ನಿರ್ಮೂಲನೆ ಮತ್ತು ಮಾನವತೆಯ ವಿರುದ್ಧದ ಅಪರಾಧವನ್ನು ತಡೆಗಟ್ಟುವ ಜವಾಬ್ದಾರಿ’ ಕುರಿತ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಸೋಮವಾರ ನಡೆದ ಚರ್ಚೆಯ ವೇಳೆ, ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು.

ಕಾಶ್ಮೀರದ ಜನರು ಹತ್ಯೆಗಳು ಮತ್ತು ಸಾಮೂಹಿಕ ಅಂಧತ್ವ ಮುಂತಾದ ಪಾತಕ ಅಪರಾಧಗಳ ಬಲಿಪಶುಗಳು ಎಂದು ಲೋಧಿ ಹೇಳಿದರು.

ಪಾಕಿಸ್ತಾನದ ಆರೋಪಗಳಿಗೆ ತನ್ನ ಉತ್ತರಿಸುವ ಹಕ್ಕನ್ನು ಚಲಾಯಿಸಿದ ಭಾರತ, ಅದರ ಕಾಶ್ಮೀರ ಕುರಿತ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿತು.

‘‘ನಮ್ಮೆಲ್ಲರಿಗೂ ಮಹತ್ವದ್ದಾಗಿರುವ ವಿಷಯವೊಂದರ ಬಗ್ಗೆ ನಾವು ದಶಕದಲ್ಲೇ ಮೊದಲ ಬಾರಿಗೆ ಗಂಭೀರ ಚರ್ಚೆಯೊಂದನ್ನು ನಡೆಸುತ್ತಿರುವಾಗ, ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಪರಿಸ್ಥಿತಿಯ ಬಗ್ಗೆ ಅನಗತ್ಯ ಹೇಳಿಕೆಯೊಂದನ್ನು ನೀಡುವ ಮೂಲಕ ಒಂದು ನಿಯೋಗವು ಈ ವೇದಿಕೆಯನ್ನು ಮತ್ತೊಮ್ಮೆ ದುರುಪಯೋಗಪಡಿಸಿಕೊಂಡಿದೆ’’ ಎಂದು ವಿಶ್ವಸಂಸ್ಥೆಯ ಭಾರತೀಯ ಕಚೇರಿಯ ಪ್ರಥಮ ಕಾರ್ಯದರ್ಶಿ ಸಂದೀಪ್ ಕುಮಾರ್ ಬಯ್ಯಪು ಹೇಳಿದರು.

 ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಪಾಕಿಸ್ತಾನದ ಇಂಥ ಪ್ರಯತ್ನಗಳು ಹಿಂದೆಯೂ ವಿಫಲವಾಗಿವೆ ಹಾಗೂ ವಿಶ್ವಸಂಸ್ಥೆಯು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಬಯ್ಯಪು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News