ನಗರ ಯೋಜನೆ-ಉದ್ಯೋಗವೃದ್ಧಿಗೆ ಮುನ್ನುಡಿ ಬರೆದ ಕೆಂಪೇಗೌಡ: ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ

Update: 2018-06-27 13:48 GMT

ಧಾರವಾಡ, ಜೂ.27: ಬೆಂಗಳೂರು ನಿರ್ಮಾಣದ ಮೂಲಕ ಅತ್ಯುತ್ತಮ ನಗರ ಯೋಜನೆ, ದುಡಿಯುವ ಕೈಗಳಿಗೆ ಕೆಲಸ, ವ್ಯಾಪಾರ ವಹಿವಾಟು ವೃದ್ಧಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಗುರುಪಾದಪ್ಪಶಿರೂರ ಹೇಳಿದ್ದಾರೆ.

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯನಗರ ಅರಸರ ಸಾಮಂತರಾಗಿದ್ದ ನಾಡಪ್ರಭು ಕೆಂಪೇಗೌಡರು, ಅಂದಿನ ತಮ್ಮ ರಾಜಧಾನಿ ಹಂಪಿಯನ್ನು ನೋಡಿ ಬಂದು ಬೆಂಗಳೂರನ್ನು ನಿರ್ಮಿಸಲು ಪ್ರೇರಣೆ ಪಡೆದರು. ನಗರ ಯೋಜನೆ, ಕೆರೆಗಳ ನಿರ್ಮಾಣದ ಮೂಲಕ ಎಲ್ಲ ದುಡಿಯುವ ಕೈಗಳಿಗೆ ಅವರು ಕೆಲಸ ನೀಡಿದರು. ಇಂದಿನ ಪೀಳಿಗೆ ಇತಿಹಾಸವನ್ನು ಅರಿಯುವ ಕೆಲಸ ಮಾಡಬೇಕು. ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ, ವಿಹಾರ ಕೈಗೊಳ್ಳುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಸಾಮಾಜಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ನಾಡು ಕಟ್ಟಲು ಶ್ರಮಿಸಿದ ಇಂತಹ ಮಹನೀಯರನ್ನು ಸ್ಮರಿಸಲು, ಹೊಸಪೀಳಿಗೆಯ ಯುವಜನರು ತಮ್ಮ ಮನಸ್ಸಿನಲ್ಲಿ ಐತಿಹಾಸಿಕ ವ್ಯಕ್ತಿಗಳ ಸಾಧನೆಗಳನ್ನು ತುಂಬಿಕೊಳ್ಳಲು ಜಯಂತಿ ಆಚರಣೆಗಳು ಸಹಕಾರಿಯಾಗಿವೆ ಎಂದರು.

ಗಂಗರ ಕಾಲದಲ್ಲಿ ಬೆಂಗಾವಲು ಪಡೆ ನೆಲೆಯೂರುತ್ತಿದ್ದ ಕಾರಣ ಇದನ್ನು ಬೆಂಗಾವಲೂರು ಎಂದು ಕರೆಯಲಾಗುತ್ತಿತ್ತು. ಎಲ್ಲ ಪ್ರಜೆಗಳ, ರೈತರ ನಾಡಿಮಿಡಿತವನ್ನು ಖುದ್ದಾಗಿ ಅರಿತುಕೊಂಡ ಕೆಂಪೇಗೌಡರು ಕ್ರಿ.ಶ.1537 ರಲ್ಲಿ ಬೆಂಗಳೂರು ಸ್ಥಾಪನೆಗೆ ಮುಂದಾದರು. ವಿಜಯನಗರದ ಸಾಮಂತರಾಗಿದ್ದ ಅವರು ಎಂದಿಗೂ ತಮ್ಮ ರಾಜನಿಷ್ಠೆ ಬದಲಿಸಲಿಲ್ಲ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ರಾಯಮಾನೆ ಮಾತನಾಡಿ, ಕೆಂಪೇಗೌಡರು ಹಾಗೂ ವಿಜಯನಗರ ಅರಸರ ದೂರದೃಷ್ಟಿಯ ನಗರ ರಚನೆಯ ವಿನ್ಯಾಸಗಳಿಂದ ಇಂದಿನ ಆಡಳಿತ ಸ್ಫೂರ್ತಿ ಪಡೆಯಬೇಕು ಎಂದರು. 480 ವರ್ಷಗಳ ಹಿಂದೆ ಸ್ಥಾಪನೆಯಾದ ಬೆಂಗಳೂರು ಈಗ ವಿಶ್ವದ ಪ್ರಮುಖ ನಗರಗಳಲ್ಲಿ ಒಂದೆನಿಸಿದೆ. ಹಳೆಯ ವಿನ್ಯಾಸ ಮುಂದಿಟ್ಟುಕೊಂಡು ಹೊಸದಾಗಿ ನಗರವನ್ನು ಪುನರ್ ನಿರ್ಮಿಸಬೇಕು. ಐಟಿ, ವಿಮಾನ ನಿಲ್ದಾಣ, ಬಿಆರ್‌ಟಿಎಸ್ ಮೂಲಕ ಇದೀಗ ರಾಜ್ಯದ ಎರಡನೇ ದೊಡ್ಡ ನಗರ ಎಂಬ ಹಿರಿಮೆ ಹೊಂದಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳನ್ನು ಸಮರ್ಪಕವಾಗಿ ಯೋಜಿತ ರೀತಿಯಲ್ಲಿ ಕಟ್ಟಬೇಕು ಎಂದು ಅವರು ಹೇಳಿದರು.

ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ತಲೆ ಎತ್ತುತ್ತಿರುವ ಅಮರಾವತಿ ನಿರ್ಮಾಣದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ನಾವು ಅರಿತುಕೊಳ್ಳಬೇಕು ಎಂದು ಸ್ನೇಹಲ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ಉಪಭಾಗಾಧಿಕಾರಿ ಮುಹಮ್ಮದ್ ಝುಬೇರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ್ ಶಿಂತ್ರೆ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ತಹಶೀಲ್ದಾರ್ ಪ್ರಕಾಶ ಕುದರಿ, ಒಕ್ಕಲಿಗರ ಸಂಘದ ರಾಘವೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್, ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಎಚ್.ತಿಮ್ಮಪ್ಪಗೌಡ, ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News