ಮಳೆಹಾನಿ ಪರಿಹಾರಕ್ಕೆ ಜಿಲ್ಲೆಗೆ 5 ಕೋ. ರೂ. ಬಿಡುಗಡೆ: ಸಚಿವ ದೇಶಪಾಂಡೆ

Update: 2018-06-27 13:59 GMT

ಚಿಕ್ಕಮಗಳೂರು, ಜೂ.27: ಮಳೆಹಾನಿ ಪರಿಹಾರ ನೀಡಲು ಸರಕಾರದಲ್ಲಿ ಹಣದ ಕೊರತೆಯಿಲ್ಲ. ಪ್ರತಿ ಜಿಲ್ಲೆಗೆ ಐದು ಕೋಟಿ ಹಣ ನೀಡಲಾಗಿದೆ. ಮಳೆಹಾನಿ ವರದಿ ತಯಾರಿಸಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಂದಾಯ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 30 ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 82 ರಷ್ಟು ಮಳೆಯಾಗಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಮಳೆಯಿಂದ ಶೃಂಗೇರಿ ಭಾಗದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಮ್ಮ ಗಮನಕ್ಕೆ ತಂದಿದ್ದಾರೆ. ತಕ್ಷಣ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಸೂಚಿಸಿದ್ದೇನೆ. ಮಳೆಯಿಂದ ಪ್ರಾಣ ಹಾನಿಯಾದ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಸರ್ಕಾರ ನೀಡುತ್ತಿದೆ. ಮಳೆಯಿಂದ ಶೇ.75ರಷ್ಟು ಮನೆಗೆ ಹಾನಿಯಾದರೆ 95 ಸಾವಿರ, ಸಂಪೂರ್ಣ ಹಾನಿಯಾದರೆ 1 ಲಕ್ಷ 1 ಸಾವಿರ ಪರಿಹಾರ ನೀಡಲು ಅವಕಾಶವಿದೆ. ಮನೆ ಹಾನಿಗೆ ಜಿಲ್ಲಾಡಳಿತ ಈಗಾಗಲೇ ಪರಿಹಾರ ನೀಡಿದೆ. ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ ಎಂದರು.

ಮಳೆಯಿಂದ 24.19 ಕೋಟಿ ರೂ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಮಾರ್ಗ, ಉಪಕರಣಗಳು ಸೇರಿದಂತೆ ಶೇ. 90ರಷ್ಟು ಹಾನಿಯಾಗಿದೆ. ಶಿಥಿಲಗೊಂಡ ಸೇತುವೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಒಂದು ವಾರದ ಗಡುವು ನೀಡಲಾಗಿದೆ. ಕುಡಿಯುವ ನೀರಿನ ಟ್ಯಾಂಕರ್‍ಗಳಿಗೆ ಹಣ ಸಂದಾಯ ಬಾಕಿ ಇದ್ದು, ಹಣ ಪಾವತಿಯ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದೇನೆ ಎಂದರು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಈಗಾಗಲೇ ಸಂಗ್ರಹಿಸಿಡಲಾಗಿದೆ. ಅಗತ್ಯಕ್ಕೆ ತಕ್ಕತೆ ನೀಡಲಾಗುವುದು. ತೋಟಗಾರಿಕ ಬೆಳೆಗಳಾದ ಬಾಳೆ, ಶುಂಠಿ ಬೆಳೆಗೆ ಹಾನಿಯಾಗಿದೆ. ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಫಾರಂ ನಂ 50,53 ಪಾರದರ್ಶಕ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 1ಲಕ್ಷ 48 ಸಾವಿರ ಅರ್ಜಿಗಳು ಬಾಕಿ ಇವೆ. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಅರ್ಜಿ ಶೀಘ್ರ ವಿಲೇವಾರಿಗೆ ಸೂಚನೆ ನೀಡಿದ್ದೇನೆ ಎಂದರು. ಮಲೆನಾಡು ಭಾಗದಲ್ಲಿ ವಿದ್ಯುತ್ ಕಡಿತ, ಮಳೆ, ಗಾಳಿಯಿಂದ ರೈತರಿಗೆ ಪಹಣಿ ವಿತರಣೆಗೆ ವಿಳಂಬವಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಇಲಾಖೆ ತಂತ್ರಜ್ಞಾನವನ್ನು ಬಳಸಿಕೊಂಡು ಸರಿಯಾದ ಸಮಯಕ್ಕೆ ರೈತರಿಗೆ ಪಹಣ ಸಿಗುವ ರೀತಿಯಲ್ಲಿ ಯೋಜನೆ ರೂಪಿಸಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದರು.

ತಾಲೂಕು ಪಂಚಾಯತ್ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂಬ ದೂರುಗಳಿವೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇಲಾಖೆಗಳಿಗೆ ಅನಿರೀಕ್ಷಿತ ಬೇಟಿನೀಡುವಂತೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News