ಯೋಜನಾ ಬದ್ಧ ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ: ಶಾಸಕ ಅಪ್ಪಚ್ಚು ರಂಜನ್

Update: 2018-06-27 14:26 GMT

ಮಡಿಕೇರಿ, ಜೂ.27: ಬೆಂಗಳೂರು ನಿರ್ಮಾತೃ, ಆದರ್ಶ ಆಡಳಿತಗಾರ ಕೆಂಪೇಗೌಡರ ಆಡಳಿತ ವ್ಯವಸ್ಥೆ, ದಕ್ಷತೆ ವಿಚಾರಗಳನ್ನು ಇಂದಿನ ಯುವ ಜನರು ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ನೀಡಿದ್ದಾರೆ.   

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ಆದರ್ಶ ಆಡಳಿತಗಾರರಾಗಿ ಬೆಂಗಳೂರು ನಗರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಶಿಸ್ತು ಬದ್ಧ ಹಾಗೂ ಯೋಜನಾ ಬದ್ಧ ಬೆಂಗಳೂರು ನಗರ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪಿಸಿದ್ದರಿಂದ ಇಂದು ಬೃಹತ್ ಹೆಮ್ಮರವಾಗಿ ಬೆಂಗಳೂರು ನಗರ ಬೆಳೆದಿದೆ ಎಂದು ಶಾಸಕರು ಹೇಳಿದರು.  

ನಾಡಪ್ರಭು ಕೆಂಪೇಗೌಡರಂತೆ ಮಹಾತ್ಮ ಗಾಂಧೀಜಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಹೀಗೆ ಹಲವರ ವಿಚಾರ ಧಾರೆಗಳನ್ನು ಯುವ ಜನರು, ವಿದ್ಯಾರ್ಥಿಗಳು ತಿಳಿದುಕೊಳ್ಳುವುದರ ಜೊತೆಗೆ, ಅವರಂತೆ ಆದರ್ಶ ಹಾಗೂ ಮಾದರಿಯಾಗಿ ನಡೆದುಕೊಂಡಾಗ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಎಂಪಿ.ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.   

ಸರ್ಕಾರಿ ಜಯಂತಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಇರುತ್ತದೆ. ಆಯಾಯ ಸಮಾಜದವರು ಬೆರಳೆಣಿಕೆಯಷ್ಟು ಮಂದಿ ಪಾಲ್ಗೊಳ್ಳುತ್ತಾರೆ. ಆದ್ದರಿಂದ ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ, ಸರ್ಕಾರದ ಜಯಂತಿಗಳನ್ನು ಒಂದೇ ದಿನ ಆಚರಿಸುವುದು ಒಳಿತು. ಈ ಸಂಬಂಧ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಅಪ್ಪಚ್ಚುರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.   

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡರದ್ದಾಗಿದೆ. ಸುಮಾರು 38 ವರ್ಷಗಳ ಕಾಲ ಬೆಂಗಳೂರು ಆಳ್ವಿಕೆ ಮಾಡಿದ್ದಾರೆ. ಕೆಂಪೇಗೌಡರು ಸ್ಥಾಪಿಸಿ ಕಟ್ಟಿ ಬೆಳೆಸಿದ ನಗರ ಇಂದು ವಿಶ್ವ ವಿಖ್ಯಾತವಾಗಿದೆ. ಈ ನಗರ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲಾಗಿದೆ ಎಂದು ಅವರು ತಿಳಿಸಿದರು. 

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ.ಎಂ.ಬೆಳ್ಯಪ್ಪ ಮಾತನಾಡಿ, ಕೆಂಪೇಗೌಡರು ಬೆಂಗಳೂರನ್ನು ಮಾದರಿ ನಗರವಾಗಿ ದೂರದೃಷ್ಟಿಯಿಂದ ನಿರ್ಮಿಸಿದರು. ವೃತ್ತಿ, ವ್ಯಾಪಾರ, ಕಸುಬುಗಳಿಗೆ ಅನುಗುಣವಾಗಿ ಅರಳೆಪೇಟೆ, ಅಕ್ಕಿಪೇಟೆ, ಬಳೇಪೇಟೆ, ಕುಂಬಾರ ಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಹೀಗೆ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಿದ ಹಿರಿಮೆ ಕೆಂಪೇಗೌಡರದ್ದಾಗಿದೆ ಎಂದರು.  ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗಾಗಿ ಹಲವು ಕೆರೆಗಳನ್ನು ನಿರ್ಮಿಸಿ ನೀರಾವರಿಗೂ ಸಹ ಹೆಚ್ಚಿನ ಒತ್ತು ನೀಡಿದ್ದರು ಎಂದು ಅವರು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಬೆಂಗಳೂರು ನಗರವು ಬೃಹತ್ ಮಹಾನಗರ ಪಾಲಿಕೆಯಾಗಿ 1.25 ಕೋಟಿ ಜನಸಂಖ್ಯೆ ಹೊಂದಿದೆ. ಹಾಗೆಯೇ 80 ಲಕ್ಷ ವಾಹನಗಳು ಸಂಚರಿಸುತ್ತಿವೆ. ಸಾಕಷ್ಟು ಐ.ಟಿ.ಬಿ.ಟಿ. ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ಇದೊಂದು ಅದ್ಭುತ ನಗರ ಎಂದು ಅವರು ತಿಳಿಸಿದರು. 

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಸ್ವಾಗತಿಸಿದರು, ಕಲಾವಿದ ಷಡಕ್ಷರಿ ಮತ್ತು ತಂಡದವರು ನಾಡಗೀತೆ ಹಾಡಿದರು, ನಿವೃತ್ತ ಉಪನ್ಯಾಸಕರಾದ ಶಂಕರಯ್ಯ ನಿರೂಪಿಸಿದರು, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News