ಸಮಸಮಾಜ ಸಾಕಾರಕ್ಕೆ ಪ್ರಗತಿ ಪರ ಸಂಘಟಣೆಗಳ ಒಗ್ಗಟ್ಟು ಅನಿವಾರ್ಯ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್

Update: 2018-06-27 14:29 GMT

ಚಿಕ್ಕಮಗಳೂರು, ಜೂ.27 ದಲಿತ ವರ್ಗದ ಏಳಿಗೆಗಾಗಿ ಆ ಸಮುದಾಯದ ಎಲ್ಲಾ ಸಂಘಟನೆಗಳೂ ಒಗ್ಗೂಡಿ ಒಂದೇ ವೇದಿಕೆಯನ್ನು ರಚಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಸಲಹೆ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಂಘಟನೆಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮ ದಿನದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾಜಿಕ ಸಮತಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಂದು ಕಾಲದಲ್ಲಿ ಬಲಿಷ್ಠ ಸಂಘಟನೆಯಾಗಿದ್ದ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಿ ಒಡೆದು ಹೋಗಿರುವುದರಿಂದಾಗಿ ಇತ್ತೀಚಿನ ದಿನಗಳಲ್ಲಿ ಶಕ್ತಿ ಹೀನವಾಗಿದೆ ಎಂದ ಅವರು ಯಾವುದೇ ಸಂಘಟನೆ ಬಲಗೊಳ್ಳುವುದು ಎಲ್ಲರೂ ಒಗ್ಗೂಡಿದಾಗ ಮಾತ್ರ ಎಂದು ಕಿವಿಮಾತು ಹೇಳಿದರು.

ದಲಿತ ಪರ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು, ಎಡ ಬಲ ಸೇರಿದಂತೆ ಎಲ್ಲಾ ಬಣಗಳೂ ತಮ್ಮಲ್ಲಿರುವ ವೈಷಮ್ಯ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದ ಅವರು ಇಲ್ಲದಿದ್ದಲ್ಲಿ ದಲಿತ ವರ್ಗಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ರೈತ ಚಳುವಳಿ, ಕಾರ್ಮಿಕ ಚಳುವಳಿ ಮತ್ತು ದಲಿತ ಚಳುವಳಿ ಒಗ್ಗೂಡಿ  ಒಂದೇ ವೇದಿಕೆಗೆ ಬಂದಲ್ಲಿ ಆ ವೇದಿಕೆ ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಲಿತ ಮುಖಂಡ ದಿ.ಎಂ.ಡಿ.ಗಂಗಯ್ಯ ಅವರ ಪತ್ನಿ ಉಮಾದೇವಿ, ತಮ್ಮ ಪತಿ ಸೇರಿದಂತೆ ಹಲವಾರು ಹಿರಿಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಕಟ್ಟಿ ಬೆಳೆಸಿರುವ ಸಂಘಟನೆಯನ್ನು ಎಲ್ಲಾ ಬಣಗಳೂ ಒಗ್ಗೂಡುವ ಮೂಲಕ ಉಳಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಮಲ್ಲೇಶ್ ಮಾತನಾಡಿ ದಲಿತ ಸಮುದಾಯ ಅಭಿವೃದ್ದಿಯಾಗಬೇಕಾದರೆ ಆ ವರ್ಗದ ಯುವ ಜನತೆ ತಮ್ಮ ಜನಾಂಗದ ಸಂಘಟನೆಯನ್ನು ಬಿಟ್ಟು, ಬೇರೆ ಸಂಘಟನೆಗಳಿಗೆ ಹೋಗುವುದನ್ನು ಬಿಡಬೇಕು ಎಂದರು.

ಸಿಪಿಐ ಮುಖಂಡ ಹೆಚ್.ಎಂ.ರೇಣುಕಾರಾಧ್ಯ ಮಾತನಾಡಿ, ದೇಶದಲ್ಲಿಂದು ವ್ಯಕ್ತಿಯನ್ನು ಇಟ್ಟುಕೊಂಡು ಅವರ ವಿಚಾರಧಾರೆಗಳನ್ನು ಕೈಬಿಡಲಾಗುತ್ತಿರುವುದರಿಂದಾಗಿ ಎಲ್ಲಾ ಸಂಘಟನೆಗಳೂ ಶಕ್ತಿಹೀನವಾಗುತ್ತಿವೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಬಿಎಸ್‍ಪಿ ಮುಖಂಡ ಪಿ.ವೇಲಾಯುಧನ್, ರೈತ ಸಂಘದ ಮುಖಂಡ ಗುರುಶಾಂತಪ್ಪ, ದಸಂಸ ಮುಖಂಡರಾದ ಲಲಿತ, ರಾಮು, ಕೃಷ್ಣಮೂರ್ತಿ, ರುದ್ರಪ್ಪ, ಮಹೇಂದ್ರ ಸ್ವಾಮಿ, ಶಿವಣ್ಣ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News