‘15 ವರ್ಷ ಮೇಲ್ಪಟ್ಟ ಡಿಸೇಲ್ ವಾಹನ ನಿಷ್ಕ್ರಿಯಗೊಳಿಸಿದರೆ ಪ್ರೋತ್ಸಾಹ ಧನ’
ಬೆಂಗಳೂರು, ಜೂ.27: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ 15 ವರ್ಷ ಮೇಲ್ಪಟ್ಟ ಡಿಸೇಲ್ ವಾಹನಗಳನ್ನು ನಿಷ್ಕ್ರಿಯಗೊಳಿಸುವ ವಾಹನ ಮಾಲಕರಿಗೆ ರಾಜ್ಯ ಸರಕಾರದ ವತಿಯಿಂದ ಪ್ರೋತ್ಸಾಹ ಧನ ನೀಡಲು ಚಿಂತನೆ ನಡೆಸಲಾಗಿದೆ.
ಬುಧವಾರ ವಿಕಾಸಸೌಧದಲ್ಲಿ ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್, 15 ವರ್ಷ ಮೇಲ್ಪಟ್ಟ ಡಿಸೇಲ್ ವಾಹನಗಳನ್ನು ನಿಷ್ಕ್ರಿಯಗೊಳಿಸಿದರೆ ಸರಕಾರದ ವತಿಯಿಂದ 30 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲು ಅವಕಾಶವಿದೆ ಎಂದರು.
ಸಾರಿಗೆ ಮತ್ತು ಪರಿಸರ ಇಲಾಖೆಯು ಜಂಟಿಯಾಗಿ ಡಿಸೇಲ್ ವಾಹನ ನಿಷ್ಕ್ರಿಯಗೊಳಿಸುವ ವಾಹನ ಮಾಲಕರಿಗೆ 30 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ. ಆದರೆ, ಈ ಮೊತ್ತವನ್ನು ಕನಿಷ್ಠ 60 ಸಾವಿರ ರೂ.ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಇದೆ ಎಂದು ಅವರು ಹೇಳಿದರು.
ವಿಶ್ವದ ಮಾಲಿನ್ಯಯುಕ್ತ ನಗರಗಳ ಸಾಲಿನಲ್ಲಿ ನಮ್ಮ ದೇಶದ ನಗರಗಳು ಸೇರಿವೆ. ಆದುದರಿಂದ, ಈಗ ನೀಡುತ್ತಿರುವ ಪ್ರೋತ್ಸಾಹ ಧನವನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸಿದರೆ ಹೆಚ್ಚಿನ ಜನ ತಮ್ಮ ಹಳೆಯ ವಾಹನಗಳನ್ನು ನಿಷ್ಕ್ರಿಯಗೊಳಿಸಲು ಮುಂದೆ ಬರಬಹುದು ಎಂದು ಶಂಕರ್ ತಿಳಿಸಿದರು.