ಮಂಡ್ಯ: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ

Update: 2018-06-27 16:56 GMT

ಮಂಡ್ಯ, ಜೂ.27: ಕೆಂಪೇಗೌಡರು ತಮ್ಮ ಜೀವನದಲ್ಲಿ ಇತಿಹಾಸ ಸೃಷ್ಟಿಸಿದ ವೀರ ವ್ಯಕ್ತಿಯಾಗಿದ್ದು, ಜೀವನದಲ್ಲಿ ಯಾರಾದರೂ ಸಾಧನೆ ಮಾಡಬೇಕಾದರೆ ಇತಿಹಾಸದ ಅರಿವು ಅಗತ್ಯ ಎಂದು ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಹೇಳಿದ್ದಾರೆ.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಬುಧವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದರು. ಇತಿಹಾಸ ಅರಿತವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಕೆಂಪೇಗೌಡರು ಮುಂದಾಲೋಚನೆಯಿಂದ ಕಟ್ಟಿದ ನಗರ ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಕೆಂಪೇಗೌಡ ಬೆಂಗಳೂರು ಕಟ್ಟದಿದ್ದರೆ ಮತ್ತೊಂದು ಜಿಲ್ಲೆ ರಾಜ್ಯದ ರಾಜ್ಯಧಾನಿಯಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಕೆಂಪೇಗೌಡರು ಜನಪರ ಆಡಳಿತ ನೀಡಿದರು. ಕೆಂಪೇಗೌಡ ನಂಬಿಕೆಯ ಭಕ್ತರಾಗಿದ್ದನು. ಒಂದು ಸಣ್ಣ ಸೈನ್ಯವನ್ನು ಇಟ್ಟುಕೊಂಡು ದೊಡ್ಡ ಸೈನ್ಯವನ್ನು ಸೋಲಿಸುವುದು ಸಾಧಾರಣ ಕೆಲಸವಲ್ಲ. ಯಾವುದೇ ಕಾರ್ಯಕ್ಕೆ ಮುಂದಾದರೂ ನಂಬಿಕೆ ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ನಂಬಿಕೆಯಿಂದ ಮುನ್ನಡೆದರೆ ಯಶಸ್ಸು ಖಚಿತ ಎಂದು ಅವರು ಹೇಳಿದರು.

ಬೆಂಗಳೂರಿನ ಜನತೆಗೆ ಅಗತ್ಯ ವಸ್ತುಗಳು ಸಿಗಬೇಕು ಎನ್ನುವ ಉದ್ದೇಶದಿಂದ 25ಕ್ಕೂ ಹೆಚ್ಚು ಪೇಟೆಗಳನ್ನು ಕೆಂಪೇಗೌಡ ನಿರ್ಮಿಸಿದರು. ಅವುಗಳನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿರುವುದು ಮೆಚ್ಚುಗೆಯ ವಿಚಾರ ಎಂದು ತಿಳಿಸಿದರು.

ಶಾಸಕ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಜಿಲ್ಲಾಧಿಕಾರಿ ಮಂಜುಶ್ರೀ, ಎಸ್ಪಿ, ರಾಧಿಕಾ, ಎಡಿಸಿ ವಿಜಯ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಭಾವಚಿತ್ರ ಮೆರವಣಿಗೆ: ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ನಾಡಪ್ರಭು ಕೆಂಪೇಗೌಡರ ಅಲಂಕೃತ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಚಾಲನೆ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News