ಮೈಸೂರು: ಬೀದಿ ನಾಟಕ ಕಲಾವಿದೆಯರ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಮೈಸೂರು,ಜೂ.27: ಜಾರ್ಖಂಡ್ ನಲ್ಲಿ ಬೀದಿ ನಾಟಕ ಕಲಾವಿದೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಜಿಲ್ಲಾ ಘಟಕದವರು ಬುಧವಾರ ನಗರದ ಗಾಂಧಿವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಜಾರ್ಖಂಡ್ ನ ಚೋಚಾಂಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಾನವ ಕಳ್ಳಸಾಗಣಿಕೆ ಕುರಿತು ಅರಿವು ಮೂಡಿಸುವ ಸಲುವಾಗಿ ಎನ್ ಜಿಒ ಒಂದರ ಮೂಲಕ ಬೀದಿ ನಾಟಕ ಮಾಡಲು ತೆರಳಿದ್ದ 11 ಮಂದಿ ಕಲಾವಿದರಲ್ಲಿ ಪಾತಾಳ ಗರಡಿ ಎಂಬ ಸಂಘಟನೆಯವರು 5 ಮಂದಿ ಮಹಿಳಾ ಕಲಾವಿದರನ್ನು ಅಪಹಿರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಜೊತೆಗೆ ವಿಷಯ ಹೊರಗಡೆ ತಿಳಿಸಿದರೆ ವಿಡಿಯೋ ಬಹಿರಂಗೊಳಿಸುವುದಾಗಿ ಹೇಳಿ ಕೊಲೆ ಬೆದರಿಕೆ ಹಾಕಿದ್ದಾರೆ. ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರವನ್ನು ಖಂಡಿಸಿ ಜನರಲ್ಲಿ ಅರಿವು ಮೂಡಿಸುವ ಪ್ರಗತಿಪರರು, ಕಲಾವಿದರಿಗೂ ಈ ರೀತಿಯ ದುಸ್ಥಿತಿ ಬಂದೊಗಿರುವುದು ನಿಜಕ್ಕೂ ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ನಾಟಕ ಕಲಾವಿದೆಯರ ಮೇಲೆ ಅತ್ಯಾಚಾರವೆಸಗಿದ ದುರುಳರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆಯರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ರಕ್ಷಣೆಯನ್ನು ಒದಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಟ ಮಂಡ್ಯರಮೇಶ್, ಕಲಾವಿದ ಮೈಮ್ ರಮೇಶ್ ಇತರರು ಹಾಜರಿದ್ದರು.