ಬ್ಯಾಂಕ್ ಅಧಿಕಾರಿಗಳು ಬಡವರು, ರೈತರನ್ನು ಆತ್ಮೀಯವಾಗಿ ಮಾತನಾಡಿಸಿ: ಸಂಸದ ಆರ್.ಧ್ರುವನಾರಾಯಣ
ಮೈಸೂರು,ಜೂ.27: ಬ್ಯಾಂಕ್‍ಗಳಲ್ಲಿನ ಮ್ಯಾನೇಜರ್ ಗಳು ಬಡವರನ್ನು, ರೈತರನ್ನು ಆತ್ಮೀಯವಾಗಿ ಮಾತನಾಡಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಂಸದ ಆರ್.ಧ್ರುವನಾರಾಯಣ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಭಾರತೀಯ ಸ್ಟೇಟ್ ಬ್ಯಾಂಕಿನ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಹಾಗೂ ಪ್ರಗತಿ ಪರಿಶೀಲನೆಯ ತ್ರೈಮಾಸಿಕ ಸಭೆಯಲ್ಲಿ ಭಾವಹಿಸಿ ಅವರು ಮಾತನಾಡಿದರು.
ಬಡವರು, ರೈತರು ಬ್ಯಾಂಕುಗಳಿಗೆ ಬಂದಾಗ ಸಿಬ್ಬಂದಿಗಳು ಸೇರಿದಂತೆ ಅನೇಕ ಮ್ಯಾನೇಜರ್ ಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂಬು ಆರೋಪವಿದೆ. ನಿಮ್ಮ ಕೆಲಸ ಎಷ್ಟೇ ಇದ್ದರೂ ಮೊದಲು ಇಂತಹವರ ಸಮಸ್ಯೆಗಳನ್ನು ಆಲಿಸಿ. ವಿದ್ಯಾರ್ಥಿಗಳಿಗೆ ಎಜುಕೇಷನ್ ಲೋನ್ ನೀಡಲು ಅನೇಕ ಬಾರಿ ಸತಾಯಿಸುತ್ತೀರಿ. ವಿದ್ಯಾರ್ಥಿಗಳನ್ನು ಅಲೆಸದೆ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕರ್ನಾಟಕದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುವ ಕನ್ನಡೇತರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕನ್ನಡ ಕಲಿತು ವ್ಯವಹರಿಸುವುದು ಕಡ್ಡಾಯ ಎಂದು ತಾಕೀತು ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಕನ್ನಡೇತರ ಅಧಿಕಾರಿಗಳು ಬಳಕೆ ಮಾಡುವ ಭಾಷೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಬ್ಯಾಂಕ್ ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರ ಜೊತೆ ಮುಕ್ತವಾಗಿ ಮಾತುಕತೆ ನಡೆಸಬೇಕು. ಇದಕ್ಕೆ ಗ್ರಾಮೀಣ ಬ್ಯಾಂಕ್ ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್ ರೀಜನಲ್ ಮ್ಯಾನೇಜರ್ ಶಿವಲಿಂಗಯ್ಯ, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್ ಸೇರಿದಂತೆ ಅನೇಕ ಅಧಿಕಾರಿಳು ಸಭೆಯಲ್ಲಿ ಉಪಸ್ಥಿತರಿದ್ದರು.