ಕೆಂಪೇಗೌಡರ ಜಯಂತಿಗೆ ರಜೆ ಘೋಷಿಸಿ: ಸಚಿವ ಸಾ.ರಾ.ಮಹೇಶ್ ಒತ್ತಾಯ

Update: 2018-06-27 17:19 GMT

ಮೈಸೂರು,ಜೂ.27: ಎಲ್ಲಾ ಮಹನೀಯರ ಜಯಂತಿಗೆ ನೀಡಿರುವ ರಜೆಯನ್ನು ರದ್ದುಗೊಳಿಸಿ ಇಲ್ಲವೇ ಕೆಂಪೇಗೌಡರ ಜಯಂತಿಗೆ ರಜೆ ಘೋಷಿಸಿ ಎಂದು  ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಒತ್ತಾಯಿಸಿದರು.

ನಗರದ ಕಲಾಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಂಪೇಗೌಡ ಜಯಂತೋತ್ಸವ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 528ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಇತ್ತೀಚೆಗೆ ವಿವಿಧ ಮಹನೀಯರುಗಳ ಜಯಂತಿಯ ಹೆಸರಿನಲ್ಲಿ ಇಡೀ ದಿವಸ ಅಧಿಕಾರಿಗಳು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕುಂಠಿತವಾಗಿವೆ. ಹಾಗಾಗಿ ಇಂತಹ ಗಣ್ಯರ ಶುಭ ಜಯಂತಿಯಂದು ಹೆಚ್ಚು ಹೆಚ್ಚಾಗಿ ಕರ್ತವ್ಯ ನಿರ್ವಹಿಸಿದರೆ ಸಮಾಜದಲ್ಲಿ ಸುಧಾರಣೆ ಕಂಡು ಬರಲಿದೆ ಎಂದರು.

ರಾಜ್ಯ ಸರ್ಕಾರವು ಈಗಾಗಲೇ ಅನೇಕ ಮಹನೀಯರ ಜಯಂತಿಗಳಿಗೆ ರಜೆ ಘೋಷಿಸಿದೆ. ಆದರೆ ಈ ನಾಡನ್ನು ಕಟ್ಟಿದ ಅಪ್ರತಿಮ ಧೀಮಂತ ನಾಯಕ ಕೆಂಪೇಗೌಡರ ಜಯಂತಿಗೂ ರಜೆ ಘೋಷಿಸುವಂತೆ ನಾನು ಈಗಾಗಲೇ ಮನವಿ ಸಲ್ಲಿಸಿದ್ದೇನೆ. ಆದರೇ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಎಲ್ಲಾ ಪ್ರಮುಖರ ಜಯಂತಿ ಕಾರ್ಯಕ್ರಮಗಳಿಗೆ ಘೋಷಿಸಿರುವ ರಜೆಯನ್ನು ರದ್ದು ಪಡಿಸಿ ಸಾಂಪ್ರದಾಯಿಕವಾಗಿ ಅವರ ಜಯಂತಿಯನ್ನು ಆಚರಿಸುವುದರ ಮೂಲಕ ಹೆಚ್ಚಿನ ಕರ್ತವ್ಯವನ್ನು ನಿರ್ವಹಿಸಿದರೆ ಅದಕ್ಕೆ ಒಂದು ಅರ್ಥ ಬರುತ್ತದೆ ಎಂದರು.

ನಾಡ ಪ್ರಭು ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ಜಾತಿ ರಹಿತವಾಗಿ ಕೆಲಸ ನಿರ್ವಹಿಸಿ ಧೀಮಂತ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಸೂಕ್ಷ್ಮ ಸಮಾಜಕ್ಕೆ ಸ್ಪಂದಿಸಿದ ಎಲ್ಲರನ್ನು ಒಟ್ಟಾಗಿ ನಡೆಸಿಕೊಂಡು ಹೋಗುವಂತಹ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದರೆ ಮಾತ್ರ ಸಮಾಜ ಸುಧಾರಣೆಗೊಳ್ಳುತ್ತದೆ. ತಮ್ಮ ಮನೆಮಂದಿಯವರನ್ನೆಲ್ಲ ಬಲಿ ಕೊಟ್ಟ ನಾಡಪ್ರಭು ಕೆಂಪೇಗೌಡರು ಬೃಹತ್ ಬೆಂಗಳೂರು ನಿರ್ಮಾಣಕ್ಕೆ ಕಾರಣ ಕರ್ತರಾಗಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಇದಕ್ಕೂ ಮೊದಲು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ನಂದಿ ಧ್ವಜ, ಪೂಜಾ ಕುಣಿತ, ವೀರಗಾಸೆ, ಕರಡಿ ಕುಣಿತ, ಕೋಲಾಟ, ಕಂಸಾಳೆ ಸೇರಿದಂತೆ ಅನೇಕ ಕಲಾಪ್ರಕಾರಗಳು ಪಾಲ್ಗೊಂಡು ನೆರೆದಿದ್ದ ಜನರಿಗೆ ಮನರಂಜನೆ ನೀಡಿದವು. ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಹೊರಟು ಕೆ.ಆರ್.ವೃತ್ತ, ಅರಸು ರಸ್ತೆ, ಜೆ.ಎಲ್.ಬಿ ರಸ್ತೆ ಮೂಲಕ ಹಾದು ಕಲಾಮಂದಿರ ತಲುಪಿತು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥನಂದ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮೇಯರ್ ಭಾಗ್ಯವತಿ, ಸಂಸದರಾದ ಆರ್.ಧ್ರುವನಾರಾಯಣ, ಪ್ರತಾಪ್ ಸಿಂಹ, ಜಿ.ಪಂ ಅಧ್ಯಕ್ಷೆ ನಯಿಮಾ ಸುಲ್ತಾನ್, ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News