ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಅರಣ್ಯ ಸಚಿವ ಆರ್.ಶಂಕರ್ ಭರವಸೆ

Update: 2018-06-27 18:05 GMT

ಮಡಿಕೇರಿ, ಜೂ.27: ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿ ಅಳವಡಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವರಾದ ಆರ್.ಶಂಕರ್ ಅವರು ತಿಳಿಸಿದ್ದಾರೆ.  

ನಗರದ ಅರಣ್ಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಈಗಾಗಲೇ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕಾರಿಡಾರ್, ಕಂದಕ, ರೈಲ್ವೆ ಹಳಿ, ತಂತಿ ಬೇಲಿ, ಸೋಲಾರ್ ಬೇಲಿ ನಿರ್ಮಾಣ, ಹೀಗೆ ಹಲವು ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಆದರೂ ಕಾಡಾನೆ ಮತ್ತು ಮಾನವನ ನಡುವೆ ಸಂಘರ್ಷ ಉಂಟಾಗುತ್ತಿದೆ. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.  

ಕೊಡಗು ಜಿಲ್ಲೆಯಲ್ಲಿ ಗುರ್ತಿಸಲಾಗಿರುವ ಪುಂಡಾನೆಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಕಾಡಿನಲ್ಲಿ ಕಾಡಾನೆಗಳಿಗೆ ಬೇಕಿರುವ ಬಿದಿರು, ಹಲಸು, ಬಾಳೆ, ಕಬ್ಬು ಮತ್ತಿತರ ಆಹಾರ ಪದಾರ್ಥಗಳನ್ನು ಯಥೇಚ್ಚವಾಗಿ ಬೆಳೆಯಲು ಪ್ರಯತ್ನಿಸಲಾಗುವುದು, ಜೊತೆಗೆ ಅರಣ್ಯ ಸಂಪತ್ತು ಕ್ರೋಡಿಕರಣಕ್ಕೂ ಒತ್ತು ನೀಡಲಾಗುವುದು ಎಂದು ಅರಣ್ಯ ಸಚಿವರಾದ ಆರ್.ಶಂಕರ್ ಅವರು ವಿವರಿಸಿದರು. 

ಕರ್ನಾಟಕದ ಉತ್ತರ ಭಾಗದಲ್ಲಿ ಅರಣ್ಯ ಕಡಿಮೆ ಇದ್ದು, ಹಸಿರು ಹೊದಿಕೆ ಮಾದರಿಯಲ್ಲಿ ಹೆಚ್ಚಿನ ಅರಣ್ಯ ಬೆಳೆಸಲು ಚಿಂತನೆ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಕಾಡು ಪ್ರಾಣಿಗಳ ಹಾವಳಿಂದ ಉಂಟಾಗುವ ಹಾನಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು, ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಕೇಳಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು. 

ರೈತರಿಗೆ ವೈಜ್ಞಾನಿಕ ಪರಿಹಾರ ವಿತರಣೆ ಮಾಡಬೇಕು. ರೈತರು ಯಾವುದೇ ಕಾರಣಕ್ಕೂ ಕಚೇರಿಗೆ ಅಲೆಯುವಂತೆ ಮಾಡಬಾರದು, ಇಂತಹ ಪ್ರಕರಣಗಳು ಕೇಳಿಬಂದರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.   

ಸೋಮವಾರಪೇಟೆ- ಸುಬ್ರಮಣ್ಯ ಮಾರ್ಗದಲ್ಲಿ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸಲಾಗುವುದು. ಕಾಡಾನೆ ಹಾವಳಿ ನಿಯಂತ್ರಣ ಸಂಬಂಧ ಸದ್ಯದಲ್ಲಿಯೇ ರೈತರೊಂದಿಗೆ ಸಭೆ ಆಹ್ವಾನಿಸಲಾಗುವುದು ಎಂದು ಸಚಿವರು ಹೇಳಿದರು.  

ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ವನಪಾಲಕರು, ಅರಣ್ಯ ರಕ್ಷಕರು ಕಡಿಮೆ ಇದ್ದಲ್ಲಿ, ಅಗತ್ಯ ಪ್ರಸ್ತಾವನೆ ಸಲ್ಲಿಸಲು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.   

ಸುದ್ದಿಗೋಷ್ಠಿಗೂ ಮೊದಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕ್ರಿಸ್ತರಾಜು, ಮಂಜುನಾಥ್, ಜಯ ಇತರೊಂದಿಗೆ ಅರಣ್ಯ ಇಲಾಖೆಯ ಬಗ್ಗೆ ಮಾಹಿತಿ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News