2ಜಿ ಪ್ರಕರಣ ತನಿಖಾಧಿಕಾರಿಯ ವಿರುದ್ಧದ ಆರೋಪ ಗಂಭೀರವಾದುದು : ಸುಪ್ರೀಂಕೋರ್ಟ್

Update: 2018-06-27 18:44 GMT

ಹೊಸದಿಲ್ಲಿ, ಜೂ.27: ಏರ್‌ಸೆಲ್- ಮ್ಯಾಕ್ಸಿಸ್ ವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇ.ಡಿ)ದ ಹಿರಿಯ ಅಧಿಕಾರಿ ರಾಜೇಶ್ವರ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪ ಅತ್ಯಂತ ಗಂಭೀರವಾಗಿದ್ದು ಈ ಕುರಿತು ಗಮನ ಹರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

2 ಜಿ ಪ್ರಕರಣ ಅತ್ಯಂತ ಗಂಭೀರವಾಗಿದ್ದು , ಯಾವುದೇ ತನಿಖಾಧಿಕಾರಿಯ ಬಗ್ಗೆಯೂ ಜನರಲ್ಲಿ ಸಂಶಯ ಇರಬಾರದು ಎಂದು ನ್ಯಾಯಾಧೀಶರಾದ ಅರುಣ್ ಮಿಶ್ರ ಮತ್ತು ಎಸ್.ಕೆ.ಕೌಲ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ರಜಾಕಾಲದ ಪೀಠ ತಿಳಿಸಿದೆ. ಸಿಂಗ್ ಅವರು ಆದಾಯ ಮೀರಿದ ಆಸ್ತಿಯನ್ನು ಹೊಂದಿದ್ದಾರೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಲು ಸರಕಾರ ಬಯಸಿದೆ ಎಂದು ಕೇಂದ್ರ ಸರಕಾರದ ಪ್ರತಿನಿಧಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ತಿಳಿಸಿದರಲ್ಲದೆ ಸೀಲ್ ಮಾಡಿದ ಕವರ್‌ನಲ್ಲಿರಿಸಿದ ಪತ್ರವೊಂದನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಪತ್ರವನ್ನು ಪರಿಶೀಲಿಸಿದ ನ್ಯಾಯಪೀಠವು, ಈ ಪ್ರಕರಣದಲ್ಲಿ ಸೂಕ್ಷ್ಮ ವಿಷಯಗಳು ಒಳಗೊಂಡಿವೆ. ವಾಸ್ತವವಾಗಿ ಆರೋಪಗಳು ಕೇಳಿ ಬಂದಾಗ, ಅದು ಸತ್ಯವೋ ಸುಳ್ಳೋ ಎಂಬುದು ಬೇರೆ ವಿಷಯ, ಆರೋಪದ ಬಗ್ಗೆ ತನಿಖೆ ನಡೆಯಲೇಬೇಕು ಎಂದು ತಿಳಿಸಿತು. ಅಲ್ಲದೆ ಈ ಪ್ರಕರಣದಲ್ಲಿ ಕೆಲವು ಬೆರಗುಗೊಳಿಸುವ ವಿಷಯಗಳು ತಿಳಿದುಬಂದಿವೆ ಎಂದು ನ್ಯಾಯಪೀಠ ತಿಳಿಸಿದೆ.

ನೀವೊಬ್ಬ ಅಧಿಕಾರಿ ಅಷ್ಟೇ. ನಿಮಗೆ ನೇರವಾಗಿ ಕ್ಲೀನ್‌ಚಿಟ್ ನೀಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಜವಾಬ್ದಾರನಾಗಿದ್ದಾರೆ. ನೀವು ಕೂಡಾ ಜವಾಬ್ದಾರರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ನಿಮ್ಮ ವಿರುದ್ಧ ಗಂಭೀರವಾದ ದೂರುಗಳಿವೆ. ನಿಮಗೆ ಹಾನಿ ಎಸಗಲು ಅಥವಾ ನಿಮ್ಮ ವಿರುದ್ಧ ಟೀಕಿಸಲು ನಾವು ಬಯಸುವುದಿಲ್ಲ ಎಂದು ನ್ಯಾಯಪೀಠ ರಾಜೇಶ್ವರ್ ಸಿಂಗ್‌ರನ್ನು ಉದ್ದೇಶಿಸಿ ತಿಳಿಸಿತು.

ರಾಜೇಶ್ವರ್ ಸಿಂಗ್ ಆದಾಯ ಮೀರಿ ಆಸ್ತಿಯನ್ನು ಹೊಂದಿದ್ದು ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ತನಿಖಾ ಪತ್ರಕರ್ತ ಎಂದು ಹೇಳಿಕೊಂಡಿರುವ ರಜನೀಶ್ ಕಪೂರ್ ಎಂಬವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಕಪೂರ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದ ಸಿಂಗ್, ಈಗಾಗಲೇ ನಡೆಯುತ್ತಿರುವ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ಕಪೂರ್ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಮಧ್ಯೆ, ಕಪೂರ್ ಸಲ್ಲಿಸಿರುವ ಅರ್ಜಿಯಲ್ಲಿ ತನ್ನನ್ನೂ ಒಂದು ಪಕ್ಷ ಎಂದು ಪರಿಗಣಿಸುವಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News