ಕಾಂಗ್ರೆಸ್ ಜೊತೆಗೆ ಲೋಕಸಭೆ ಚುನಾವಣೆ ಎದುರಿಸುತ್ತೇವೆ: ದೇವೇಗೌಡ

Update: 2018-06-28 14:47 GMT

ಬೆಂಗಳೂರು/ಹೊಸದಿಲ್ಲಿ, ಜೂ. 28: ಅವಧಿಗೆ ಮುನ್ನವೇ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬಹುದು ಎಂದು ತಿಳಿಸಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಕಾರ್ಯವೈಖರಿ ನೋಡಿದರೆ ಚುನಾವಣೆ ನಿಶ್ಚಿತ. ಅವರು ಈಗಾಗಲೇ ರಾಜ್ಯಗಳಿಗೆ ಚುನಾವಣೆಗೆ ಸನ್ನದ್ಧರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು. ಲೋಕಸಭೆಯ ಮುಂಗಾರು ಅಧಿವೇಶನವೆ ಕೊನೆಯ ಅಧಿವೇಶನ ಆದರೂ ಅಚ್ಚರಿ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ನಾನು ಎನ್‌ಡಿಎ ಹೊರತಾದ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇನೆ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾಂಗ್ರೆಸ್ ಜತೆಗೆ ಚುನಾವಣೆ: ಮುಂಬರುವ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಜತೆಗೆ ಎದುರಿಸಲಿದ್ದೇವೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಿದ್ದು, ಈ ಬಗ್ಗೆ ಚಿಂತನೆ ನಡೆದಿದೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು. ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದ ದೇವೇಗೌಡ, ನಾನು ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆಯೂ ಚರ್ಚೆಯಾಗಿದೆ. ರಾಜ್ಯದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳು ಬಗೆಹರಿದ ಮೇಲೆ ಮಾತುಕತೆ ನಡೆಸಲಾಗುತ್ತೆ ಎಂದರು.

ರಕ್ಷಣಾ ಇಲಾಖೆ ಸಭೆಗೆ ಬಂದದ್ದು: ತಾನು ಕಾಂಗ್ರೆಸ್ ಮುಖಂಡರ ಭೇಟಿಗೆ ದಿಲ್ಲಿಗೆ ಬಂದಿದ್ದೇನೆಂಬ ಸುದ್ಧಿಯಾಗಿದೆ. ಆದರೆ, ನಾನು ರಕ್ಷಣಾ ಇಲಾಖೆ ಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಬಂದಿದ್ದೇನೆ ಎಂದ ಅವರು, ರಕ್ಷಣಾ ಇಲಾಖೆ ಮೂರು ಸಭೆಗಳಿಗೆ ಬಂದಿರಲಿಲ್ಲ. ಆದರೆ, ಸಭೆ ಕಾರಣಾಂತರಗಳಿಂದ ರದ್ದಾಗಿದೆ ಎಂದರು.

ಮೈತ್ರಿ ಸರಕಾರದ ಸುಗಮ ಕಾರ್ಯನಿರ್ವಹಣೆಗೆ ಸಮನ್ವಯ ಸಮಿತಿ ರಚಿಸಿದ್ದು, ಬಜೆಟ್ ಮಂಡನೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಸಮನ್ವಯ ಸಮಿತಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತೀರ್ಮಾನ ಮಾಡಲಿದ್ದಾರೆಂದು ದೇವೇಗೌಡ ತಿಳಿಸಿದರು.

ಪ್ರತಿಕ್ರಿಯೆಗೆ ನಕಾರ: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ನಡುವೆ ಮಾತುಕತೆ ಆಗಿದ್ದು, ಆ ಒಪ್ಪಂದದ ಪ್ರಕಾರ ಸರಕಾರ ನಡೆಯಲಿದೆ. ಈ ಸಂಬಂಧ ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News