‘ಸಿದ್ದರಾಮಯ್ಯರನ್ನು ನಿರ್ಲಕ್ಷಿಸಿದರೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ’
ಬೆಂಗಳೂರು, ಜೂ. 28: ಮೈತ್ರಿಕೂಟ ಸರಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನಿರ್ಲಕ್ಷ್ಯ ಮಾಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ, ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ನಿರ್ಲಕ್ಷ್ಯ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 15 ಸ್ಥಾನಗಳು ಬರುವುದಿಲ್ಲ. ಇದನ್ನು ಪಕ್ಷದ ವರಿಷ್ಠರು ಅರ್ಥ ಮಾಡಿಕೊಳ್ಳಬೇಕು ಎಂದು ಕೋರಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಿಲ್ಲ. ಅಲ್ಲದೆ, ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ನಿರಂಜನಾನಂದಪುರಿ ಸ್ವಾಮಿ ಇದೇ ಸಂದರ್ಭದಲ್ಲಿ ಆಕ್ಷೇಪಿಸಿದರು.
ಕುಮಾರಸ್ವಾಮಿ ಯಾವುದೇ ಒಂದು ಸಮುದಾಯದ ಮುಖ್ಯಮಂತ್ರಿಯಲ್ಲ. ಅವರು ರಾಜ್ಯದ ಸಿಎಂ. ಹೀಗಾಗಿ ಕುರುಬ ಸಮುದಾಯದ ಅಧಿಕಾರಿಗಳ ವಿರುದ್ಧ ದ್ವೇಷ ಸಾಧನೆ ಸರಿಯಲ್ಲ. ಇದನ್ನು ಕೂಡಲೇ ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಮೈತ್ರಿ ಸರಕಾರ ಸಮುದಾಯದ ದ್ವೇಷ ಸಾಧನೆ ಮಾಡುತ್ತಿದೆಯೇ ಹೊರತು, ರೈತರ ಆತ್ಮಹತ್ಯೆ ತಡೆಯುವ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದ ಅವರು, ಆರಂಭದಲ್ಲಿ ಕುರುಬ ಸಮಾಜದ ಮುಖಂಡ ಸಿದ್ದರಾಮಯ್ಯರನ್ನು ಕಡೆಗಣಿಸಿದ್ದ ಸರಕಾರ ಇದೀಗ ಜನಾಂಗದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ 80 ಸ್ಥಾನಗಳು ಬರಲು ಕುರುಬ ಮತ್ತು ಅಲ್ಪಸಂಖ್ಯಾತರ ಬೆಂಬಲ ಮುಖ್ಯ ಕಾರಣ. ಕಾಂಗ್ರೆಸ್ ಬೆಂಬಲದಿಂದ ಮೈತ್ರಿ ಸರಕಾರದಲ್ಲಿ ಸಿಎಂ ಆಗಿರುವ ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಸಿಎಂ ಅಲ್ಲ. ಕರ್ನಾಟಕದ 6 ಕೋಟಿ ಜನರ ಮುಖ್ಯಮಂತ್ರಿ. ಎಲ್ಲರನ್ನು ಅವರು ಸಮಾನವಾಗಿ ಕಾಣಬೇಕು ಎಂದರು.
ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದರೆ ಬೇಸರವಾಗುತ್ತದೆ. ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸೇಡಿನ ಕ್ರಮ. ಅವರಿಗೆ ಹುದ್ದೆಯನ್ನು ನೀಡದಿರುವುದು ದುರಂತ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಿರಂಜನಾನಂದ ಪುರಿ ಸ್ವಾಮಿ ಎಚ್ಚರಿಕೆ ನೀಡಿದರು.