ರಾಜ್ಯಪಾಲರ ಭಾಷಣಕ್ಕೆ ಸಚಿವ ಸಂಪುಟ ಒಪ್ಪಿಗೆ: ಸಚಿವ ಕೃಷ್ಣಭೈರೇಗೌಡ

Update: 2018-06-28 14:32 GMT

ಬೆಂಗಳೂರು, ಜೂ.28: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಮಾಡಲಿರುವ ಭಾಷಣಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಕಾರ್ಯದರ್ಶಿಯ ಅಧಿಕಾರಾವಧಿ ವಿಸ್ತರಣೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಈವರೆಗೆ ಯಾವುದೆ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಜೂ.30 ರಂದು ಹಾಲಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನಿವೃತ್ತರಾಗಲಿದ್ದಾರೆ. ಅಷ್ಟರೊಳಗೆ ಕೇಂದ್ರ ಸರಕಾರದಿಂದ ಪ್ರತಿಕ್ರಿಯೆ ಬರದಿದ್ದರೆ, ನೂತನ ಮುಖ್ಯ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ಹೇಳಿದರು.

ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದ ಶೇ.40ರಷ್ಟು ಅನುದಾನವನ್ನು ಶೇ.48ಕ್ಕೆ ಹೆಚ್ಚಿಸುವಂತೆ 14ನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದೆ. ಅದರಂತೆ, ಅನುದಾನ ಹೆಚ್ಚಿಸಲಾಗುವುದು. ಅಲ್ಲದೆ, ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಜಿಲ್ಲಾ ಉಸ್ತುವಾರಿ ನೇಮಕಕ್ಕೆ ಆಗ್ರ: ಸರಕಾರ ಅಸ್ತಿತ್ವಕ್ಕೆ ಬಂದಾಗಿದೆ. ಅಲ್ಲದೆ, ವಿಧಾನಮಂಡಲದ ಅಧಿವೇಶನವು ಇನ್ನು ಕೆಲವೆ ದಿನಗಳಲ್ಲಿ ಆರಂಭಗೊಳ್ಳಲಿದೆ. ಆದಷ್ಟು ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕೆಂದು ಸಚಿವರು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸಚಿವರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನು ಮೂರು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆಯಾ ಜಿಲ್ಲೆಯವರಿಗೆ ಉಸ್ತುವಾರಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದು, ಆಯಾ ಜಿಲ್ಲೆಯವರಿಗೆ ಉಸ್ತುವಾರಿ ನೀಡುವ ಬದಲು, ಅಕ್ಕಪಕ್ಕದ ಜಿಲ್ಲೆಗಳ ಉಸ್ತುವಾರಿ ನೀಡುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News