×
Ad

ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

Update: 2018-06-28 21:52 IST

ಹನೂರು,ಜೂ.28: ಕಳೆದ 6 ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ದೊಡ್ಡತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 38 ಕಾಮಗಾರಿಗಳು ನಡೆದಿದ್ದು, 40 ಲಕ್ಷ ರೂ ಅನುದಾನ ವ್ಯಯಿಸಲಾಗಿದೆ ಎಂದು ತಾಲೂಕು ನರೇಗಾ ಸಂಯೋಜಕ ಮನೋಹರ್ ತಿಳಿಸಿದರು.

ಹನೂರು ಸಮೀಪದ ದೊಡ್ಡತ್ತೂರು ಗ್ರಾಪಂ ಆವರಣದಲ್ಲಿ ಆಯೋಜಿಸಿದ್ಧ 2018-19ನೇ ಸಾಲಿನ ನರೇಗಾ ಯೋಜನೆಯಡಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದರು. ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವುದರ ಮೂಲಕ ಕೂಲಿ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದುದರಿಂದ ಉದ್ಯೋಗ ಪಡೆಯ ಬಯಸುವವರು ಗ್ರಾಪಂಗೆ ನಿಗದಿತ ನಮೂನೆಯ 6ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ಅವಧಿಯಲ್ಲಿ 40 ಲಕ್ಷ ರೂ ಖರ್ಚು ಮಾಡಲಾಗಿದೆ. ಆದುದರಿಂದ ಗ್ರಾಪಂ ವ್ಯಾಪ್ತಿಯ ಪ್ರತಿ ಕುಟುಂಬವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಿಲ್ಲಮ್ಮಚಿಕ್ಕಮರಿ, ಗ್ರಾಪಂ ಸದಸ್ಯರಾದ ದಾಸಪ್ಪ, ಮಹದೇವಸ್ವಾಮಿ, ನಿಂಗಮ್ಮ , ಮಾದಮ್ಮ , ಪಿಡಿಒ  ಮಹದೇವಸ್ವಾಮಿ ಕೆಂಪಯ್ಯನಹಟ್ಟಿ ಶಾಲಾ ಮುಖ್ಯ ಶಿಕ್ಷಕಿ ಪಾರ್ವತಮ್ಮ ಹಾಗೂ ಗ್ರಾಮಸ್ಥರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News