ಶೃಂಗೇರಿ: ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆ; ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

Update: 2018-06-28 17:16 GMT

ಶೃಂಗೇರಿ, ಜೂ.28: ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಂದ  ಸುರಿದ ಭಾರೀ ಮಳೆಯಿಂದಾಗಿ ತುಂಗಾ ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು, ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಆತ ತುಂಗಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರ ಬಹುದೆಂದು ಕುಟುಂಬದವರು ಶಂಕೆ ವ್ಯಕ್ತ ಪಡಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಆತನಿಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ ಘಟನೆ ವರದಿಯಾಗಿದೆ.

ತಾಲೂಕಿನ ನೆಮ್ಮಾರು ಗ್ರಾಮದ ಹೊಳೆಹೊದ್ಲು ನಿವಾಸಿ ಉಮೇಶ್(32) ಎಂಬವರು ಬುಧವಾರ ರಾತ್ರಿ ಸುರಿಯುತ್ತಿದ್ದ ಭಾರೀ ಮಳೆಯಲ್ಲಿಯೇ ತಮ್ಮ ಜಮೀನು ಪಕ್ಕದಲ್ಲೆ ಹರಿಯುವ ತುಂಗಾ ನದಿಯಲ್ಲಿ ಬಲೆ ಮೂಲಕ ಮೀನು ಹಿಡಿಯಲು ತೆರಳಿದ್ದು, ಗುರವಾರ ಮಧ್ಯಾಹ್ನವಾದರೂ ಉಮೇಶ್ ಮನೆಗೆ ಹಿಂದಿರುಗಿಲ್ಲ. ಅವರು ನದಿಯ ದಿಢೀರ್ ನೆರೆಯಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಿ ನಾಪತ್ತೆಯಾದ ವ್ಯಕ್ತಿಯ ಕುಟುಂಬದವರು ಗುರುವಾರ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಕಂದಾಯಾಧಿಕಾರಿಗಳ ನೆರವಿನೊಂದಿಗೆ ಗುರುವಾರ ನೆಮ್ಮಾರು ಗ್ರಾಮದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಉಮೇಶ್‍ಗಾಗಿ ಹುಡುಕಾಟ ನಡೆಸಿದರು. ಆದರೆ ಉಮೇಶ್ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಕಂದಾಯಾಧಿಕಾರಿಗಳು ತಿಳಿಸಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹುಡುಕಾಟಕ್ಕೆ ತೊದರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರೀ ಮಳೆ: ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಸುರಿದ ಮಳೆ ಗುರುವಾರ ಕೂಡಾ ಮುಂದುವರಿದಿದೆ.ಬುಧವಾರ ರಾತ್ರಿ ಸುರಿದ ಮಳೆಯಿಂದ ಶೃಂಗೇರಿ ಪಟ್ಟಣದ ಕಪ್ಪೆಶಂಕರ ದೇವಾಲಯ ಮುಳುಗಡೆಯಾಗಿದ್ದು, ತುಂಗಾನದಿಯ ನೀರಿನ ಹರಿವಿನ ಹೆಚ್ಚಳದಿಂದ ಪಟ್ಟಣದ ನದಿ ಪಕ್ಕದಲ್ಲಿರುವ ಬೈಪಾಸ್ ರಸ್ತೆ ನೀರಿನಿಂದ ಆವೃತ್ತಗೊಂಡಿದೆ. ಮಳೆಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಟ್ಟಣ ಸಮೀಪದ ಭಕ್ತಂಪುರದ ಬಳಿ ಧರೆ ಕುಸಿದಿದ್ದು ಅರ್ಧ ಗಂಟೆಗಳ ಕಾಲ ವಾಹನ ಸಂಪರ್ಕಕಕ್ಕೆ ಆಡಚಣೆ ಉಂಟಾಗಿತ್ತು.

ಜೂನ್ ತಿಂಗಳಲ್ಲಿ ಕೃಷಿಕರು ಅಡಿಕೆ ಮರ ಹಾಗೂ ಕಾಳುಮೆಣಸಿನ ಬಳ್ಳಿಗಳಿಗೆ ಬೋರ್ಡೊ ಸಿಂಪಡಣೆಯ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದರು. ಆದರೆ ಶೇ 50 ರಷ್ಟು ರೈತರು ತೋಟಗಳಿಗೆ ಜೌಷಧಿ ಸಿಂಪಡಣೆಗೆ ಚಾಲನೆ ನೀಡಲು ಮಳೆ ಪದೇಪದೇ ಅಡ್ಡಿಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News