×
Ad

ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ: ಮಡಿಕೇರಿ ನಗರಸಭೆಯಲ್ಲಿ ಸಮ್ಮಿಶ್ರ ಫಲಿತಾಂಶ

Update: 2018-06-28 23:58 IST

ಮಡಿಕೇರಿ, ಜೂ.28: ಮಡಿಕೇರಿ ನಗರಸಭೆಯ ಸ್ಥಾಯಿ ಸಮಿತಿಗೆ ಚುನಾವಣೆಯ ಮೂಲಕ ಸದಸ್ಯರ ಆಯ್ಕೆಯಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಸಮ್ಮಿಶ್ರ ಫಲಿತಾಂಶ ಹೊರ ಬಿದ್ದಿದೆ. 27 ಮತದಾರರು ಮತ ಚಲಾಯಿಸುವ ಮೂಲಕ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಿದರು.

ಬಹುಮತದ ನಿರೀಕ್ಷೆಯಲ್ಲಿದ್ದ ಬಿಜೆಪಿ 3 ಸದಸ್ಯ ಬಲಕ್ಕೆ ತೃಪ್ತಿ ಪಟ್ಟುಕೊಂಡರೆ, ಕಾಂಗ್ರೆಸ್ 1 ಸ್ಥಾನದ ಮೂಲಕ ಮುಖಭಂಗ ಅನುಭವಿಸಿತು. ಉಳಿದಂತೆ ಎಸ್‍ಡಿಪಿಐ 3, ಜೆಡಿಎಸ್ 2 ಹಾಗೂ ಕಾಂಗ್ರೆಸ್‍ನ ಬಂಡಾಯ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಯಾಗಿರುವ ಲೀಲಾಶೇಷಮ್ಮ ಅತ್ಯಧಿಕ 22 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದರು. ಬಂಡಾಯ ಕಾಂಗ್ರೆಸ್ಸಿಗರಾದ ವೀಣಾಕ್ಷಿ 21 ಮತಗಳು ಹಾಗೂ ಜೆಡಿಎಸ್ ನ ಸಂಗೀತಾ ಪ್ರಸನ್ನ 20 ಮತಗಳನ್ನು ಪಡೆಯುವ ಮೂಲಕ ಕ್ರಮವಾಗಿ ಮೂವರು ಮಹಿಳೆಯರು ನಿರ್ಣಾಯಕರೆನಿಸಿಕೊಂಡರು. ಉಳಿದಂತೆ ಬಂಡಾಯ ಕಾಂಗ್ರೆಸ್ಸಿಗರಾದ ಶ್ರೀಮತಿ ಬಂಗೇರಾ 18, ಬಿಜೆಪಿಯ ಪಿ.ಟಿ.ಉಣ್ಣಿಕೃಷ್ಣ 16. ಪಿ.ಡಿ.poನ್ನಪ್ಪ 15 ಮತಗಳು, ಸವಿತಾ ರಾಕೇಶ್ 14, ಎಸ್‍ಡಿಪಿಐ ಸದಸ್ಯರಾದ ಕೆ.ಜೆ.ಪೀಟರ್ 16, ಅಮೀನ್ ಮೊಯ್ಸಿನ್ 14,  ಮನ್ಸೂರ್ 14, ಕಾಂಗ್ರೆಸ್ ನ ತಜುಸಂ 14 ಮತಗಳನ್ನು ಗಳಿಸಿ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು. 

ಸೋತವರು ಪಡೆದ ಮತಗಳು
ಕಾಂಗ್ರೆಸ್ ನ ಪ್ರಕಾಶ್ ಆಚಾರ್ಯ 10, ಜುಲೈಕಾಬಿ 11, ಎಚ್.ಎಂ.ನಂದಕುಮಾರ್ 12,  ಬಿಜೆಪಿಯ ಅನಿತಾ ಪೂವಯ್ಯ 10, ಎ.ಕೆ.ಲಕ್ಷ್ಮಿ 11, ಕೆ.ಎಸ್.ರಮೇಶ್ 13, ಐ.ಜಿ.ಶಿವಕುಮಾರಿ 12, ಎಸ್‍ಡಿಪಿಐ ನ  ನೀಮಾ ಅರ್ಶದ್ 13 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. 

ಬಿಜೆಪಿ ವಿಫಲ: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಸ್ತಾಯಿ ಸಮಿತಿ ಸದಸ್ಯರ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಬಹುಮತಗಳಿಸುವ ಭಾರೀ ಭರವಸೆಯಲ್ಲಿದ್ದರು. ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ ಕೂಡ ಬಿಜೆಪಿ ಸದಸ್ಯರ ಪರ ಮತ ಚಲಾಯಿಸಲು ಸ್ಥಾಯಿ ಸಮಿತಿ ಚುನಾವಣೆಗೆ ಬಂದಿದ್ದರು. ಆದರೆ, ನಿರೀಕ್ಷಿತ ಸದಸ್ಯರನ್ನು ಗೆಲ್ಲಿಸುವಲ್ಲಿ ಬಿಜೆಪಿ ವಿಫಲವಾಯಿತು.

ಆಡಳಿತರೂಡ ಕಾಂಗ್ರೆಸ್ ಮತ್ತೊಮ್ಮೆ ಹೀನಾಯವಾಗಿ ಚುನಾವಣೆಯಲ್ಲಿ ಸೋಲು ಕಂಡಿತು. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತದಾನಕ್ಕೆ ಬಂದಿದ್ದರೂ ಕಾಂಗ್ರೆಸ್ ನ ತಜುಸಂ ಮಾತ್ರ ಗೆಲವು ಸಾಧಿಸಿದರು. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. 

ಕುತೂಹಲ ಮೂಡಿಸಿದ ಅಧ್ಯಕ್ಷರ ಆಯ್ಕೆ

ಆಯ್ಕೆಯಾಗಿರುವ 11 ಸದಸ್ಯರಲ್ಲಿ ಒಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿದ್ದು, ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಈಗ ನಾಲ್ಕೂ ಪಕ್ಷಗಳಲ್ಲಿ ಮೂಡಿದೆ. ಜೆಡಿಎಸ್ ನ ಲೀಲಾ ಶೇಷಮ್ಮ ಅತ್ಯಧಿಕ 22 ಮತಗಳನ್ನು ಗಳಿಸಿರುವುದರಿಂದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಬಂಡಾಯ ಕಾಂಗ್ರೆಸ್ಸಿಗರಾದ ವೀಣಾಕ್ಷಿ, ಜೆಡಿಎಸ್‍ನ ಸಂಗೀತಾ ಪ್ರಸನ್ನ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ ಸಮ್ಮಿಶ್ರ ಫಲಿತಾಂಶ ಹೊರ ಬಿದ್ದಿರುವುದರಿಂದ ಅಧ್ಯಕ್ಷ ಸ್ಥಾನದ ಅದೃಷ್ಟ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

ನಗರಸಭೆಯ ಪೌರಾಯುಕ್ತೆ ಬಿ.ಶುಭಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News