ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ

Update: 2018-06-29 14:50 GMT

ಮೈಸೂರು,ಜೂ.29: ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗಾಗಿ ಬಂಪರ್ ಕೊಡುಗೆ ಘೋಷಿಸಿದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಕೇವಲ 4,500 ರೂ. ಗಳ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಮಾನ್ಯ ಹಾಗೂ ಮಧ್ಯಮ ವರ್ಗದವರಿಗೂ ಸುಲಭ ದರದಲ್ಲಿ ಮೈಸೂರು ಸಿಲ್ಕ್ ದೊರೆಯುವಂತಾಗುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಈ ಕೊಡುಗೆಯನ್ನು ನೀಡುತ್ತಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆ ಮಾಡಲಾಗುವುದು. ಬೇಡಿಕೆಗೆ ಅನುಗುಣವಾಗಿ ಸೀರೆಗಳ ಮಾರಾಟ ಮುಂದುವರೆಯಲಿದೆ ಎಂದು ಹೇಳಿದರು.

ಮೈಸೂರಿನ ಹೆಗ್ಗುರುತಾದ ಮೈಸೂರು ಸಿಲ್ಕ್ ಅನ್ನು ನಕಲು ಮಾಡುತ್ತಿದ್ದಾರೆ, ಸರ್ಕಾರಿ ಸೌಮ್ಯದ ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆಯಿಂದ ಮಾತ್ರ ಮೈಸೂರು ಸಿಲ್ಕ್ ಉತ್ಪನ್ನವಾಗುತ್ತಿದ್ದು ಖಾಸಗಿಯವರು ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಜಾಗೃತಿ ದಳವನ್ನು ರಚಿಸಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಉದ್ಯಮಕ್ಕೆ ಉತ್ತೇಜನ ಹಾಗೂ ನಕಲಿಗೆ ಕಡಿವಾಣ ಹಾಕುವ ನೀಡುವ ನಿಟ್ಟಿನಲ್ಲಿ ವಿದೇಶ ಸೇರಿದಂತೆ ರಾಜ್ಯದ ಪ್ರವಾಸೋದ್ಯಮ ಸ್ಥಳಗಳಲ್ಲಿಯೂ ಮೈಸೂರು ಸಿಲ್ಕ್ ಸೀರೆ ಅಧಿಕೃತ ಮಳಿಗೆಗಳನ್ನು ತೆರೆಯಲಾಗುವುದು ಎಂದರು.

ರೇಸ್ ಕೋರ್ಸ್ ಸ್ಥಳಾಂತರ : ನಿಯಮ ಉಲ್ಲಂಘಿಸಿರುವ ಮೈಸೂರು ರೇಸ್ ಕ್ಲಬ್ ಅನ್ನು ಜೂ.30ರೊಳಗೆ ಸ್ಥಳಾಂತರಗೊಳಿಸುವಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಹಿಮ್ಮಾವಿನ ಬಳಿ 110 ಎಕರೆ ಜಾಗವನ್ನು ರೇಸ್ ಕೋರ್ಸ್ ಗಾಗಿ ಗುರುತಿಸಲಾಗಿದೆ. ಹಾಲಿ ಇರುವ ರೇಸ್ ಕ್ಲಬ್ ನಿಂದ ಮೃಗಾಲಯ ಹಾಗೂ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿದೆ. ಜಿಲ್ಲಾಡಳಿತದಿಂದ ಪರವಾನಿಗೆ ನವೀಕರಿಸದಿದ್ದರು, ನ್ಯಾಯಾಲಯದಿಂದ ಅನುಮತಿ ಪಡೆದು ರೇಸ್ ನಡೆಸಲಾಗುತ್ತಿದೆ. ಆದರೆ ನ್ಯಾಯಾಲಯ ಕುದುರೆ ಓಡಿಸಲು ಮಾತ್ರ ಅನುಮತಿ ನೀಡಿದರೂ ರೇಸ್ ಕ್ಲಬ್ ನವರು 800ಕ್ಕೂ ಹೆಚ್ಚು ಕುದುರೆಗಳನ್ನು ಸಾಕಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

30 ವರ್ಷಗಳವರೆಗೂ ಗುತ್ತಿಗೆ ಕರಾವಿದ್ದು, ಕಾಲ ಕಾಲಕ್ಕೆ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಿತ್ತು. ಆದರೆ 39 ಕೋಟಿ ರೂ ವಂಚಿಸಿರುವುದಲ್ಲದೇ ನಿಯಮ ಮೀರಿ ಖಾಸಗಿಯವರಿಗೆ ಉಪಗುತ್ತಿಗೆ ನೀಡಿದ್ದಾರೆ ಎಂದರು.

ಸಂವಾದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಖಜಾಂಚಿ ದಕ್ಷಿಣಾ ಮೂರ್ತಿ, ನಗರ ಉಪಾಧ್ಯಕ್ಷ ಸುಬ್ರಮಣ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News