ಬಜೆಟ್ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ?

Update: 2018-06-29 15:02 GMT

ಬೆಂಗಳೂರು, ಜೂ. 29: ಪಕ್ಷದ ಮುಖಂಡರು ಹಾಗೂ ಶಾಸಕರ ಅಸಮಾಧಾನ ನಿವಾರಿಸಲು ಬಜೆಟ್ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ನಿರ್ಧರಿಸಿದ್ದು, ಇಬ್ಬರು ಮಾಜಿ ಸಚಿವರು ಸೇರಿದಂತೆ ಐವರನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನಿಂದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸಿ.ಎಸ್.ಶಿವಳ್ಳಿ, ಈ. ತುಕಾರಾಮ್, ಬಿ.ಸಿ.ಪಾಟೀಲ್ ಅಥವಾ ಬಿ.ಕೆ.ಸಂಗಮೇಶ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಜುಲೈ 1ಕ್ಕೆ ಹೈಕಮಾಂಡ್ ಸಮ್ಮತಿಸಿದರೆ ಸಂಪುಟ ವಿಸ್ತರಣೆ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಪಕ್ಷದಲ್ಲಿನ ಭಿನ್ನಮತದ ಹಿನ್ನೆಲೆಯಲ್ಲಿ ಅತೃಪ್ತರಿಗೆ ಸ್ಥಾನ ಕಲ್ಪಿಸಲು ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್ ಸೇರಿದಂತೆ ಹಲವು ಶಾಸಕರು ಪಕ್ಷದ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದರು. ಹೀಗಾಗಿ ಅಸಮಾಧಾನಗೊಂಡ ಶಾಸಕರಿಗೆ ಎರಡನೆ ಹಂತದ ವಿಸ್ತರಣೆ ವೇಳೆ ಸ್ಥಾನದ ಭರವಸೆ ನೀಡಲಾಗಿತ್ತು.

ಅದರನ್ವಯ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯದ ಉತ್ತರ ಕರ್ನಾಟಕ ಭಾಗಕ್ಕೆ ಹಾಗೂ ಜಿಲ್ಲೆಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 1ರಂದು ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News