×
Ad

ಗೌರಿ ಲಂಕೇಶ್ ಹತ್ಯೆ ಪ್ರಕರಣ : ಅಮೋಲ್ ಕಾಳೆ ಡೈರಿಯಲ್ಲಿ ಸಂಸ್ಕೃತ ಕೋಡ್‌ವರ್ಡ್?

Update: 2018-06-29 21:00 IST

ಬೆಂಗಳೂರು, ಜೂ.29: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಆರೋಪಿ ಅಮೋಲ್ ಕಾಳೆ ಬಳಿಯಿರುವ ಡೈರಿಯನ್ನು ಪರಿಶೀಲನೆ ಮಾಡಿದ್ದು, ಸಂಸ್ಕೃತ, ಹಿಂದಿ, ಮರಾಠಿ ಭಾಷೆಯಲ್ಲಿ ಕೋಡ್‌ವರ್ಡ್ ಬರವಣಿಗೆ ಇರುವುದಾಗಿ ತಿಳಿದುಬಂದಿದೆ.

ಈಗಾಗಲೇ ಸಿಟ್(ಎಸ್‌ಐಟಿ) ವಿಚಾರಣೆಯಲ್ಲಿರುವ ಮಹಾರಾಷ್ಟ್ರ ಮೂಲದ ಅಮೋಲ್ ಕಾಳೆ ಯಾನೆ ಬಾಯ್‌ಸಾಬ್, ತನ್ನ ಡೈರಿಯಲ್ಲಿ ಹತ್ಯೆಯಾಗಿರುವ ವಿಚಾರವಾದಿಗಳ ಹೆಸರುಗಳನ್ನು ಹಿಂದಿ, ಮರಾಠಿ ಹಾಗೂ ಸಂಸ್ಕೃತ ಮಿಶ್ರಿತ ಕೋಡ್‌ವರ್ಡ್‌ನಲ್ಲಿ ಬರೆದುಕೊಂಡಿದ್ದು, ಈ ಡೈರಿಯನ್ನು ತನಿಖಾಧಿಕಾರಿಗಳು ಎಫ್‌ಎಸ್‌ಎಲ್ ವರದಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಚಾರವಾದಿಗಳಾದ ಡಾ.ಎಂ.ಎಂ.ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಹೆಸರುಗಳನ್ನು ತನ್ನ ಡೈರಿಯಲ್ಲಿ ಕೋರ್ಡ್ ವರ್ಡ್‌ನಲ್ಲಿ ಬರೆದುಕೊಂಡಿದ್ದಾನೆ. ಅದೇ ರೀತಿ, ಇನ್ನಿತರೆ ಮಾಹಿತಿಗಳು ಇರುವ ಸಾಧ್ಯತೆ ಇದ್ದು, ಸಾಮಾನ್ಯವಾಗಿ ಓದಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನೆ ಮಾಡಿದರೂ, ಅಸ್ಪಷ್ಟ ಉತ್ತರ ನೀಡುತ್ತಿದ್ದಾನೆ ಎನ್ನಲಾಗಿದೆ.

ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌರಿ ಪ್ರಕರಣದ ಆರೋಪಿಗಳನ್ನ ಸಿಐಡಿ ತನ್ನ ಕಸ್ಟಡಿಗೆ ಪಡೆಯಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಗೌರಿ ಹತ್ಯೆಯಲ್ಲಿ ಬಂಧಿತ ಆರೋಪಿ ಅಮೋಲ್ ಕಾಳೆ, ಕಲ್ಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿರುವುದರ ಬಗ್ಗೆ ಸಿಐಡಿಗೆ ಸ್ಪಷ್ಟ ಸುಳಿವು ಸಿಕ್ಕಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಆರೋಪಿಯನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಈ ಸಂಬಂಧ ಸಿಐಡಿ ಅಧಿಕಾರಿಗಳು ಸಾಕ್ಷಿಗಳನ್ನ ಕಲೆ ಹಾಕುತ್ತಿದ್ದು, ಸದ್ಯದಲ್ಲೇ ವಾರೆಂಟ್ ಮೂಲಕ ಅಮೋಲ್ ಕಾಳೆಯನ್ನ ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News