×
Ad

ಸೋದರತ್ವದಿಂದ ಬದುಕುವ ಸಮಾಜ ಕಟ್ಟಬೇಕು:ಬಿ.ಟಿ.ಲಲಿತಾನಾಯಕ್

Update: 2018-06-29 21:12 IST

ಮಂಡ್ಯ, ಜೂ.29: ಜಾತೀಯತೆ ತೊಲಗಿಸಿ ಸೋದರತ್ವದಿಂದ ಬದಕುವ ಸಮಾಜವನ್ನು ಕಟ್ಟಬೇಕು ಎಂದು ಮಾಜಿ ಸಚಿವೆ ಹಾಗೂ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷೆ ಬಿ.ಟಿ. ಲಲಿತಾನಾಯಕ್ ಕರೆ ನೀಡಿದ್ದಾರೆ.

ನಗರದ ಬಿ.ಟಿ.ಲಲಿತಾ ನಾಯಕ್ ಬಡಾವಣೆಯಲ್ಲಿ ಜಿಲ್ಲಾ ಲಂಬಾಣಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ  ಸಹಯೋಗದಲ್ಲಿ ಶುಕ್ರವಾರ ನಡೆದ 18ನೇ ಕಲಾಮೇಳ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಿಸಿರುವ ಸೇವಾಲಾಲ್ ಸಮುದಾಯ ಭವನದ ಉದ್ಘಾಟನೆಯನ್ನು  ನೆರವೇರಿಸಿ ಅವರು ಮಾತನಾಡಿದರು.

ಲಂಬಾಣಿ ಜನಾಂಗ ವಿಶ್ವದ 21 ದೇಶಗಳಲ್ಲಿ ವಾಸವಾಗಿದ್ದು, ಎಲ್ಲೇ ಹೋದರೂ ನಮ್ಮ ಸಂಪ್ರದಾಯ, ಭಾಷೆಯನ್ನು ಮಾತನಾಡಬಹುದು. ಲಂಬಾಣಿ ಜನಾಂಗದವರು ಹೊಸ ಹೊಸ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಹೊಸ ಕಲಾವಿದರ ತಂಡಗಳು ರಚನೆಯಾಗಬೇಕು. ನಮ್ಮ ಜನರ ಸಂಸ್ಕೃತಿ ನೆನಪಿರುವ ರೀತಿಯಲ್ಲಿ ಹೊಸ ಹೊಸ ನೃತ್ಯಗಳನ್ನು ಕಲಿಯಬೇಕು. ಕಲೆ ಮತ್ತು ಸಂಸ್ಕೃತಿ ಅಭಿವೃದ್ಧಿಯಾಗಬೇಕು. ಆರ್ಥಿಕವಾಗಿಯೂ ಸಹ ಮುಂದೆ ಬರಬೇಕು. ಘನತೆಯಿಂದ ಬದುಕಬೇಕು ಎಂದು ಅವರು ಸಲಹೆ ನೀಡಿದರು. 

ಈಗಿನ ಸಮ್ಮಿಶ್ರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರೂ ಸಹ ಈ ಬಡಾವಣೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದು, ಕಾಲನಿ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳ ಬಗ್ಗೆ ಅವರಿಗೆ ಮನವಿ ಮಾಡಬೇಕು. ಕಾಲನಿಯ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು ಎಂದು ಅವರು ಹೇಳಿದರು.

ಈ ಭಾಗದಲ್ಲಿ ತುರ್ತಾಗಿ ಪ್ರಥಮ ವೈದ್ಯ ಚಿಕಿತ್ಸೆ ಕೊಡುವಂತಹ ಕೇಂದ್ರ ಸ್ಥಾಪನೆಯಾಗಬೇಕು. ನಿರಾಶ್ರಿತರು ಇಲ್ಲಿ ಹೆಚ್ಚು ಮಂದಿ ನೆಲೆಸಿದ್ದಾರೆ. ಈ ಬಡಾವಣೆಯಲ್ಲಿ ಗ್ರಂಥಾಲಯ, ಅಂಗನವಾಡಿ ಎಲ್ಲವೂ ಆಗಿವೆ. ಆದರೆ, ಆಸ್ಪತ್ರೆ ಬರಬೇಕು. ಸಮುದಾಯ ಭವನ ಯಾವುದಕ್ಕೆ ಬಳಕೆಯಾಗಬೇಕೋ ಎಂಬುದರ ಕುರಿತಂತೆ ಕಾರ್ಯನಿರ್ವಹಣಾ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತಂದು ಆ ಮೂಲಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅವರು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ಚಿಕ್ಕೇಗೌಡ ಮಾತನಾಡಿ, ಲಂಬಾಣಿ ಜನಾಂಗದ ಕಲೆ ವಿಶಿಷ್ಠವಾದದ್ದು. ಈ ಕಲೆ ನಶಿಸಿಹೋಗದಂತೆ ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯ. ದೇಶದಲ್ಲಿ ಸಾವಿರಾರು ರೀತಿಯ ಸಂಸ್ಕೃತಿ ಇವೆ. ಅವೆಲ್ಲವೂ ನಶಿಸಿಹೋಗದಂತೆ ಉಳಿಯುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ನಡೆಸಬೇಕು ಎಂದರು.

ನಗರಸಭೆ ಪ್ರಭಾರ ಅಧ್ಯಕ್ಷೆ ಸುಜಾತಮಣಿ, ಮಳವಳ್ಳಿ ಪೊಲೀಸ್ ಠಾಣೆಯ ಎಚ್.ಪಿ. ಗೋಪಾಲ್, ಉಪನ್ಯಾಸಕ ಬಿ.ಆರ್.ಕುಮಾರನಾಯಕ್, ಮಂಡ್ಯ ಜಿಲ್ಲಾ ಬೋವಿ ಸಂಘದ ಅಧ್ಯಕ್ಷ ಟಿ.ಸಿ.ಗುರಪ್ಪ, ಯುವ ಮುಖಂಡ ಸಿ.ಸುಂದರ್, ಸಮಾಜ ಸೇವಕ ರವಣಯ್ಯ, ಮಂಡ್ಯ ಜಿಲ್ಲಾ ಲಂಬಾಣಿ ಸೇವಾ ಸಂಘದ ಕೃಷ್ಣನಾಯಕ್, ಇತರ ಮುಖಂಡರು ಹಾಜರಿದ್ದರು.

ಇದೇ ವೇಳೆ ಹನುಮಂತನಾಯಕ್ ತಂಡದವರಿಂದ ಪೂಜಾ ಕುಣಿತ, ತಿಮ್ಮಣ್ಣ ತಂಡದವರಿಂದ ತಮಟೆ ವಾದ್ಯ, ನಂದಿನಿ ಬಾಯಿ ತಂಡದಿಂದ ಲಂಬಾಣಿ ನೃತ್ಯ, ಅಂಬಿಕಾಬಾಯಿ ಮತ್ತು ತಂಡದಿಂದ ಸಾಂಪ್ರದಾಯಿಕ ಗೀತ ಗಾಯನವನ್ನು ಪ್ರಸ್ತುತಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News