ಪಟ್ಟಣದ ಸ್ವಚ್ಛತೆಗೆ ಮುಂದಾದ ನಾಗಮಂಗಲ ಪುರಸಭೆ
ನಾಗಮಂಗಲ, ಜೂ.29: ಪತ್ರಿಕೆಯ ವರದಿಗೆ ಎಚ್ಚೆತ್ತ ನಾಗಮಂಗಲ ಪುರಸಭೆ ಶುಕ್ರವಾರ ಬೆಳಗ್ಗೆಯಿಂದಲೆ ಪೌರಕಾರ್ಮಿಕರಿಂದ ಪಟ್ಟಣದ ಮಂಡ್ಯ ರಸ್ತೆಯಲ್ಲಿನ ಅಮ್ಮನಕಟ್ಟೆ ಕೋಡಿಯಲ್ಲಿ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ಕತ್ತರಿಸುವುದು ಮತ್ತು ರಸ್ತೆ ಪಕ್ಕದಲ್ಲಿ ಸುರಿಯಲಾಗಿದ್ದ ಕೊಳೆತ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘನಕಾರ್ಯಕ್ಕೆ ಇಳಿಸಿದ್ದರು.
ಪಟ್ಟಣದಲ್ಲಿ ಕಸದ ಸಮಸ್ಯೆಯಿಂದ ಗಬ್ಬೆದ್ದು ನಾರುತ್ತಿರುವ ಬಗ್ಗೆ ವಾರ್ತಾಭಾರತಿ ಪತ್ರಿಕೆಯ ಜೂ.27ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಸಾರ್ವಜನಿಕರು ಸೇರಿದಂತೆ ಶಾಸಕ ಸುರೇಶ್‍ಗೌಡ ಮತ್ತು ತಹಶೀಲ್ದಾರ್ ನಂಜುಂಡಯ್ಯ ಕೂಡ ಪತ್ರಿಕೆ ವರದಿ ಗಮನಿಸಿ ಪುರಸಭೆಯ ಅಧಿಕಾರಿಗಳಿಗೆ ಪಟ್ಟಣದ ಸ್ವಚ್ಛತೆಗೆ ಕ್ರಮವಹಿಸುವಂತೆ ನಿರ್ದೇಶನ ನೀಡಿದ್ದರು ಎಂದು ತಿಳಿದು ಬಂದಿದೆ.
ನಂತರದಲ್ಲಿ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಅಮ್ಮನಕಟ್ಟೆ ಕೋಡಿ ಮತ್ತು ಮಂಡ್ಯ ರಸ್ತೆಯಲ್ಲಿ ಸ್ವಚ್ಛತೆ ಕೆಲಸ ಮಾಡುವಂತೆ ಸೂಚಿಸಿದ್ದರಿಂದ ಶುಕ್ರವಾರ ಬೆಳಗ್ಗೆಯೇ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದರು.
ಪುರಸಭೆ ಆರೋಗ್ಯ ಪರಿವೀಕ್ಷಕ ನಿಂಗೇಗೌಡರ ನೇತೃತ್ವದಲ್ಲಿ ರಸ್ತೆಬದಿ ಸುರಿಯಲಾಗಿದ್ದ ಕೊಳತೆ ತ್ಯಾಜ್ಯಗಳನ್ನ ವಿಲೇವಾರಿ ಮಾಡಿ ಗಿಡಿಗಂಟೆಗಳನ್ನು ಕತ್ತರಿಸಲಾಯಿತು ಮತ್ತು ಕಟ್ಟೆಯ ಕೋಡಿಗೆ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತಾಕಾರ್ಯ ನಡೆಸಲಾಯಿತು.