ಕರ್ತವ್ಯಲೋಪವೆಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸಚಿವ ಆರ್.ಶಂಕರ್
ಧಾರವಾಡ, ಜೂ.29: ಅರಣ್ಯ ರಕ್ಷಿಸಿ, ಬೆಳೆಸುವುದರಿಂದ ನಮ್ಮ ಮುಂದಿನ ಪೀಳಿಗೆಯನ್ನು ಸಂರಕ್ಷಿಸಿದಂತೆ ಆಗುತ್ತದೆ. ಅರಣ್ಯ ಇಲಾಖೆಯಿಂದ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಸರಿಯಾಗಿ ನಿರ್ವಹಿಸದೆ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆರ್.ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಧಾರವಾಡ ನಗರದ ಹೊರವಲಯದಲ್ಲಿರುವ ಗುಂಗರಗಟ್ಟಿಯ ರಾಜ್ಯ ಅರಣ್ಯ ಅಕಾಡೆಮಿಯಲ್ಲಿ ಜರುಗಿದ 6ನೇಯ ತಂಡದ ಅರಣ್ಯ ರಕ್ಷಕ ತರಬೇತಾರ್ಥಿಗಳ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ, ಪದವಿ ಪ್ರದಾನ ಮಾಡಿ ಅವರು ಮಾನಾಡಿದರು.
ಪರಿಸರ ಕಾಪಾಡುವುದು ಸಮಾಜದ ಎಲ್ಲರ ಕರ್ತವ್ಯವಾಗಿದೆ. ಜಾಗತಿಕ ತಾಪಮಾನ ತಡೆಯುವುದು ಮತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಾಪಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಅಧಿಕಾರಿಗಳು ಕಚೇರಿಯಲ್ಲಿಯೇ ಸಮಯ ಕಳೆಯದೆ ಕಡ್ಡಾಯವಾಗಿ ಕ್ಷೇತ್ರ ಭೇಟಿ ನೀಡಿ, ಅರಣ್ಯ ಸಂರಕ್ಷಣೆ ಕುರಿತು ಪರಿಶೀಲಿಸಬೇಕು. ಕಾಡಿಗೆ ಹೋಗಿ ಅಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಗಮನಹರಿಸೇಕು ಎಂದು ಸಚಿವರು ಹೇಳಿದರು.
ಅರಣ್ಯ ಇಲಾಖೆಗೆ ಅಗತ್ಯವಿರುವ ಸುಮಾರು ಮೂರು ಸಾವಿರ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಹಂತ ಹಂತವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಜುಲೈನಲ್ಲಿ ಮಂಡಿಸುತ್ತಿರುವ ರಾಜ್ಯ ಮುಂಗಡಪತ್ರದಲ್ಲಿ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಕೇಳಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಂಕರ್ ತಿಳಿಸಿದರು.
ಮೊದಲ ರ್ಯಾಂಕ್‌ದೊಂದಿಗೆ ನಾಲ್ಕು ಚಿನ್ನದ ಪದಕ ಪಡೆದ ಮಲ್ಲಿಕಾರ್ಜುನ ಜಳಕಿ ಸೇರಿದಂತೆ 118 ಜನ ಅರಣ್ಯ ರಕ್ಷಕರಿಗೆ ಸಚಿವರು ಇದೇ ಸಂದರ್ದಲ್ಲಿ ಪದವಿ ಪ್ರದಾನ ಮಾಡಿದರು.
ಸಮಾರಂಭಕ್ಕಿಂತ ಮುನ್ನ ವಿವಿಧ ತಂಡಗಳ ಅರಣ್ಯ ರಕ್ಷಕರಿಂದ ಗೌರವ ವಂದನೆ ಸ್ವೀಕರಿಸಿದ ಸಚಿವ ಆರ್.ಶಂಕರ್, ತರಬೇತಾರ್ಥಿಗಳ ವಸತಿ ಗೃಹ, ಬಾಸ್ಕೆಟ್ ಬಾಲ್ ಆಟದ ಮೈದಾನ ಮತ್ತು ಇತರ ಕಟ್ಟಡಗಳ ಉದ್ಘಾಟನೆ ಹಾಗೂ ವಸತಿಗೃಹ, ವಿಶ್ರಾಂತಿ ಗೃಹಗಳ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಸಿ ನೆಡುವ ಮೂಲಕ ಕಾರ್ಯಕ್ರಮ ಸ್ಮರಣೀಯಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ಪುನಾತಿ ಶ್ರೀಧರ ವಹಿಸಿದ್ದರು. ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯರಾಮ, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.