ಭೋವಿ ನಿಗಮ ಮಂಡಳಿಗೆ ಅಗತ್ಯ ನೆರವು: ಸಚಿವ ವೆಂಕಟರಮಣಪ್ಪ

Update: 2018-06-30 16:19 GMT

ಬೆಂಗಳೂರು, ಜೂ.30: ಭೋವಿ ನಿಗಮ ಮಂಡಳಿಗೆ ಸರಕಾರದಿಂದ ಅಗತ್ಯ ಹಣಕಾಸು ನೆರವು ಒದಗಿಸುವುದರ ಜೊತೆಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಗಾಂಧಿನಗರದ ಖಾಸಗಿ ಹೊಟೇಲ್‌ನಲ್ಲಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯಿಂದ ಆಯೋಜಿಸಿದ್ದ, ಚಿಂತನ-ಮಂಥನ ಹಾಗೂ ಸಮುದಾಯದ ಸಚಿವರು, ಶಾಸಕರು ಹಾಗೂ ಗಣ್ಯರಿಗೆ ಸನ್ಮಾನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಸಮಾಜದ ನಿಗಮ ಮಂಡಳಿಗೆ ಹಣಕಾಸು ನೆರವು ಒದಗಿಸುವಂತೆ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ವೆಂಕಟರಮಣಪ್ಪ ತಿಳಿಸಿದರು.

ನಮ್ಮ ಭೋವಿ ಸಮಾಜದ ಜನರು ಪ್ರತಿನಿತ್ಯ ಕಠಿಣ ಪರಿಶ್ರಮ ವಹಿಸಿ ದುಡಿಯುತ್ತಿದ್ದಾರೆ. ಕಲ್ಲುಗಳನ್ನು ಒಡೆದು ಕೆರೆ-ಕಟ್ಟೆ, ಅಣೆಕಟ್ಟುಗಳನ್ನು ಕಟ್ಟುತ್ತಾ ಕುಳಿತುಕೊಳ್ಳುವುದಷ್ಟೆ ನಮ್ಮ ಸಮಾಜದ ಕಾಯಕವಲ್ಲ. ತಮ್ಮ ಕರ್ತವ್ಯದ ಜೊತೆಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ನಮ್ಮ ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿ ಉನ್ನತ ವ್ಯಾಸಂಗ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈಗಿನ ಸಮ್ಮಿಶ್ರ ಸರಕಾರ ಈ ನಿಗಮಕ್ಕೆ ಒಂದು ಸಾವಿರ ಕೋಟಿ ಅನುದಾನ ಕೊಡಬೇಕೆಂದು ಮನವಿ ಮಾಡಿದರು. ನಮ್ಮ ಜನಾಂಗ ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕೆಂದು ತಿಳಿಸಿದರು.

ನಾವು ಒಗ್ಗಟ್ಟಿನಿಂದ ಇರಬೇಕಾದರೆ, ಒಬ್ಬರನ್ನೊಬ್ಬರು ಕಾಲೆಳೆಯುವುದನ್ನು ಬಿಟ್ಟು, ಎಲ್ಲರೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ನಾನು ಸಚಿವನಾಗಿದ್ದ ಅವಧಿಯಲ್ಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಇದೀಗ, ವೆಂಕಟರಮಣಪ್ಪ ಸಚಿವರಾಗಿದ್ದಾರೆ. ಅವರು ಸಹ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರಕಾರದಿಂದ ಅಗತ್ಯ ನೆರವು ಒದ ಗಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಸಂಘದ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್ ಸೇರಿ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News