ಹನೂರು: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ಹನೂರು,ಜೂ.30: ರೈತರು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿ ಆದಾಯೋತ್ಪನ್ನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದಾಗಿದೆ ಎಂದು ಕೆ.ವಿ.ಕೆ ಹರದನಹಳ್ಳಿ ಮಣ್ಣು ವಿಜ್ಞಾನಿಯಾದ ಡಾ.ಯೋಗೇಶ್ ಅಭಿಪ್ರಾಯ ಪಟ್ಟರು
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಅರಣ್ಯ ಹಾಗೂ ಇನ್ನಿತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾದ ಕಾರಣ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಹೆಚ್ಚು ಆದಾಯದಾಯಕ ಬೆಳೆಗಳನ್ನು ಬೆಳೆಯುವುದು ಮತ್ತು ಎರೆಗೊಬ್ಬರ ಉತ್ಪಾದನೆ, ಬೇವಿನ ಎಣ್ಣೆ ತಯಾರು ಮಾಡುವುದರಿಂದ ಆರ್ಥಿಕತೆಯಲ್ಲಿ ಸುಧಾರಿಸಿಕೊಳ್ಳಬಹುದಾಗಿದೆ. ಜೊತೆಗೆ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವುದರಿಂದ ಹೆಚ್ಚಿನ ಇಳುವರಿಯನ್ನು ಸಹ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಕ್ರಿಮಿನಾಶಕ ಹಾಗೂ ರಸಗೂಬ್ಬರವನ್ನು ಹೆಚ್ಚು ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಈ ಹಿನ್ನಲೆಯಲ್ಲಿ ಸಾವಯವ ಪದ್ದತಿಯ ಮೂಲಕ ಸಮಗ್ರ ಕೃಷಿಯನ್ನು ಆಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಪ್ರಾಕೃತಿಕ ವಿಕೋಪ, ಸಿಡಿಲು, ಬಿರುಗಾಳಿ ಮುಂತಾದ ಅನಿರಿಕ್ಷೀತ ಘಟನೆಗಳಿಂದ ಬೆಳೆ ಹಾನಿಯಾಗಿ ನಷ್ಟಕ್ಕೆ ಒಳಗಾಗುವ ರೈತರಿಗೆ ವಿಮೆ ಯೋಜನೆ ಒಂದು ಕವಚವಾಗಿದೆ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಯುವ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಬೆಳೆ ವಿಮಾ ಹಣವನ್ನು ಪಾವತಿಸಿದ್ದೇ ಆದ್ದಲ್ಲಿ ನಿರಾಳವಾಗಿ ಜೀವನ ಮಾಡ ಬಹುದಾಗಿದೆ ಎಂದು ರೈತರಿಗೆ ಕಿವಿ ಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಂಜುಳಾ, ತಾಪಂ ಅಧ್ಯಕ್ಷ ರಾಜು, ಪಪಂ ಅಧ್ಯಕ್ಷೆ ಮಮತಾ ಮಹದೇವ್, ಉಪಾಧ್ಯಕ್ಷ ಬಸವರಾಜು ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್ ಮಹದೇವು, ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿದರ್, ಮೀನುಗಾರಿಕೆ ಇಲಾಖೆ ಅಧಿಕಾರಿಗಳಾದ ಸ್ನೇಹಾ, ಕೃಷಿ ಅಧಿಕಾರಿಗಳಾದ ಸಿದ್ದಪ್ಪಸ್ವಾಮಿ, ಮನೋಹರ್, ದೊರೈರಾಜು ಹಾಗೂ ಇನ್ನಿತರರಿದ್ದರು.