ಸೂಕ್ಷ್ಮ ಪರಿಸರ ತಾಣದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ: ಶಾಸಕ ಬೋಪಯ್ಯ ಅಸಮಾಧಾನ

Update: 2018-06-30 17:12 GMT

ಮಡಿಕೇರಿ, ಜೂ.29: ವಸತಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ ಮತ್ತಿತರ ಮೂಲ ಸೌಲಭ್ಯವನ್ನು ಪ್ರತಿ ಗ್ರಾಮ ಮತ್ತು ಕುಟುಂಬಕ್ಕೂ ಕಲ್ಪಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ ಸೂಕ್ಷ್ಮ ಪರಿಸರ ತಾಣದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಶಾಸಕ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಇಂತಹ ದೂರುಗಳು ಕೇಳಿ ಬಂದಲ್ಲಿ ಸಂಬಂಧಪಟ್ಟ ಗ್ರಾ.ಪಂ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.    

ನಗರದ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ಶನಿವಾರ ನಡೆದ ತಾ.ಪಂ.ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  
ಸೂಕ್ಷ್ಮ ಪರಿಸರ ಪ್ರದೇಶವೆಂದು ಅಧಿಸೂಚನೆ ಹೊಡಿಸಲಾಗಿದೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ತೊಂದರೆ ನೀಡುವುದಾದರೂ ಏಕೆ ಎಂದು ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರು.  

ಮನೆ ನಿರ್ಮಿಸಿಕೊಳ್ಳಬಾರದೆಂದು ಎಲ್ಲಿಯೂ ಹೇಳಿಲ್ಲ. ಮೂಲಸೌಲಭ್ಯ ಕಲ್ಪಿಸಲು ಯಾವುದೇ ಆಕ್ಷೇಪಣೆಗಳು ಸಹ ಇಲ್ಲ. ಸೂಕ್ಷ್ಮ ಪರಿಸರ ತಾಣ ಸಂಬಂಧದ ಸಮಿತಿಯಲ್ಲಿ ನಾವುಗಳು ಸಹ ಇದ್ದು, ಇನ್ನೂ ಅನುಷ್ಠಾನಕ್ಕೆ ಬರದಿದ್ದರೂ ಮನೆ ನಿರ್ಮಿಸಲು ಎನ್‍ಒಸಿ ನೀಡಲು ಪಿಡಿಒಗಳು ಹಿಂದೆ ಸರಿಯುತ್ತಿರುವುದು ಯಾಕೆ ಎಂದು ಶಾಸಕರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಮಡಿಕೇರಿ ನಗರ ಪ್ರದೇಶದಲ್ಲಿ ಒಳಚರಂಡಿ ನಿರ್ಮಿಸಿ ಇಡೀ ಮಡಿಕೇರಿ ಜನತೆ ಶಾಪ ಇಡುವಂತಾಗಿದೆ. ಇನ್ನಾದರೂ ಸರಿಪಡಿಸುವ ಕಾರ್ಯವಾಗಲಿ ಎಂದು ಒಳಚರಂಡಿ ಮಂಡಳಿ ಎಂಜಿನಿಯರ್ ಗೆ ತಾಕೀತು ಮಾಡಿದರು. 

ಕಾಮಗಾರಿ ಯಾವ ವೇಳೆಯಲ್ಲಿ ಆರಂಭಿಸಬೇಕು ಎಂಬುದೇ ಎಂಜಿನಿಯರ್ ಗಳಿಗೆ ತಿಳಿದಿಲ್ಲ. ಮಡಿಕೇರಿಯಲ್ಲಿ ವ್ಯಾಪಕ ಮಳೆಯಾಗುವುದರಿಂದ ಗುಡ್ಡಗಳಿಂದ ಕೂಡಿರುವುದರಿಂದ ಒಳಚರಂಡಿ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಶಾಸಕರು, ಮಾಡಿರುವ ಕಾಮಗಾರಿಯನ್ನಾದರೂ ಸರಿಪಡಿಸುವಂತೆ ಒಳಚರಂಡಿ ಮಂಡಳಿ ಎಂಜಿನಿಯರ್ ಗೆ ಸೂಚನೆ ನೀಡಿದರು. ಕುಂಡಾಮೇಸ್ತ್ರಿ ಯೋಜನೆಯಡಿ ಇನ್ನೂ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.      

ಸರ್ಕಾರಿ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. 2020ರ ವೇಳೆಗೆ ಮನೆ ಇಲ್ಲದವರಿಗೆ ಮನೆ ನಿರ್ಮಿಸಬೇಕು ಎಂಬುದು ಭಾರತ ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಆಶ್ರಯ, ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ ಅರ್ಹರಿಗೆ ವಸತಿ ಕಲ್ಪಿಸಬೇಕು. ಯಾರೂ ಸಹ ನಿವೇಶನ ಹಾಗೂ ಮನೆ ಇಲ್ಲದವರು ಎಂಬ ದೂರುಗಳು ಕೇಳಿ ಬರದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.

ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್, ಸರ್ಕಾರದ ಕಾರ್ಯಕ್ರಮ ಅನುಷ್ಠಾನದಲ್ಲಿ ವಿಳಂಬ ಮಾಡಬಾರದು. ಆಯಾಯ ಕಾಲದಲ್ಲಿ ಅನುಮೋದನೆ ಪಡೆದು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.  

ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಮಾತನಾಡಿ, ತಾ.ಪಂ.ಗೆ ಬಿಡುಗಡೆಯಾಗುವ ಅನುದಾನವನ್ನು ಸಕಾಲದಲ್ಲಿ ಖರ್ಚು ಮಾಡಬೇಕು. ಮಳೆಗಾಲದ ಅವಧಿಯಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತಿತರ ಕಾರ್ಯಕ್ರಮ ಅನುಷ್ಠಾನದಲ್ಲಿ ಚುರುಕು ಪಡೆಯಬೇಕು ಎಂದು ಹೇಳಿದರು. ಶಾಲಾ-ಕಾಲೇಜು ಸುತ್ತಮುತ್ತ ಗಾಂಜಾ ಮಾರಾಟ ಬಗ್ಗೆ ವರದಿಗಳು ಕೇಳಿ ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಬೇಕು ಎಂದು ಬಿ.ಎ.ಹರೀಶ್ ಅವರು ಸಲಹೆ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News